ಉತ್ತರ ಪ್ರದೇಶದಲ್ಲಿ ಬಿಜೆಪಿ ಮುಸ್ಲಿಮರಿಗೆ ಟಿಕೆಟ್ ಕೊಡಬೇಕಿತ್ತು : ರಾಜನಾಥ್ ಸಿಂಗ್

ಲಕ್ನೋ, ಫೆ.23: ಉತ್ತರ ಪ್ರದೇಶದಲ್ಲಿ ಬಿಜೆಪಿ ಮುಸ್ಲಿಮರಿಗೆ ಟಿಕೆಟ್ ಕೊಡಬೇಕಿತ್ತು ಎಂದು ಗೃಹಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ದೇಶದ ಅತಿದೊಡ್ಡ ರಾಜ್ಯದ ವಿಧಾನಸಭಾ ಚುನಾವಣೆ ಪ್ರಕ್ರಿಯೆ ನಡುವೆ ಟೈಮ್ಸ್ ನೌ ಸಂಪಾದಕ ರಾಹುಲ್ ಶಿವಶಂಕರ್ ಜತೆ ಮಾತನಾಡಿದ ಅವರು, "ಇತರ ರಾಜ್ಯಗಳಲ್ಲಿ ನಾವು ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಿದ್ದೇವೆ. ಇದು ಉತ್ತರಪ್ರದೇಶದಲ್ಲೂ ಆಗಬೇಕಿತ್ತು. ನಾನು ಅಲ್ಲಿರಲಿಲ್ಲ. ಬಿಜೆಪಿ ಸಂಸದೀಯ ಮಂಡಳಿ ಪರಿಶೀಲನೆ ನಡೆಸಿದಾಗ, ಗೆಲ್ಲುವ ಸಾಮರ್ಥ್ಯದ ಯಾವ ಮುಸ್ಲಿಮ್ ಮುಖಂಡರೂ ಸಿಗಲಿಲ್ಲ. ಆದಾಗ್ಯೂ ಅವರಿಗೂ ಟಿಕೆಟ್ ನೀಡಬೇಕಿತ್ತು" ಎಂದು ಸ್ಪಷ್ಟಪಡಿಸಿದರು.
ಯಾರಿಗೆ ಅರ್ಹತೆ ಇದೆಯೋ ಅವರಿಗೆ ಟಿಕೆಟ್ ಸಿಗಬೇಕಿತ್ತು ಎಂದು ಹೇಳಿದರು. ರಾಜ್ಯ ಬಿಜೆಪಿ ಘಟಕ ಕೂಡಾ ಶಿಫಾರಸು ಮಾಡುವ ವೇಳೆ ಗೆಲ್ಲುವ ಅರ್ಹತೆ ಇರುವ ಯಾವ ಮುಸ್ಲಿಮ್ ಅಭ್ಯರ್ಥಿಯೂ ಕಂಡುಬಂದಿಲ್ಲ ಎಂದು ವಿವರಿಸಿದರು.
ಇದು ಪಕ್ಷಕ್ಕೆ ಚುನಾವಣಾ ಅವಕಾಶಕ್ಕೆ ಧಕ್ಕೆಯಾಗಲಿದೆ. ಪಕ್ಷದಲ್ಲಿ ಅಲ್ಪಸಂಖ್ಯಾತ ಅಭ್ಯರ್ಥಿಗಳನ್ನು ಬೆಳೆಸಲು ಭವಿಷ್ಯದಲ್ಲಿ ಒತ್ತು ನೀಡಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.





