ಎಟಿಎಂ ಪಿನ್ ನಂಬರನ್ನು ಪರ್ಸ್ ನಲ್ಲೇ ಬಿಟ್ಟವನಿಗೆ ಏನಾಯಿತು ನೋಡಿ

ಲಕ್ನೋ, ಫೆ.23: ತನ್ನ ಎಟಿಎಂ ಪಿನ್ ನಂಬರನ್ನು ಪರ್ಸ್ ನಲ್ಲೇ ಬಿಟ್ಟಿದ್ದ ಖಾಸಗಿ ಸಂಸ್ಥೆಯೊಂದರ ಉದ್ಯೋಗಿ ಇತ್ತೀಚೆಗೆ ತನ್ನ ಪರ್ಸ್ ಕಳೆದುಕೊಂಡಿದ್ದು, ಈ ವಿಚಾರ ತಿಳಿಯುವಷ್ಟರಲ್ಲಿ ಆತನ ಪಿನ್ ನಂಬರನ್ನು ಬಳಸಿ ಯಾರೋ ಆತನ ಬ್ಯಾಂಕ್ ಖಾತೆಯಿಂದ ರೂ.18,000 ಹಿಂಪಡೆದಿದ್ದರು.
ಹಝ್ರತ್ ಗಂಜ್ ಪ್ರದೇಶದ ರಫ್ತು ಕಂಪೆನಿಯೊಂದರಲ್ಲಿ ಉದ್ಯೋಗದಲ್ಲಿರುವ ಅಜಯ್ ಶರ್ಮ ಕಳೆದ ಶನಿವಾರ ಸಂಜೆಯೇ ಕಚೇರಿಯಿಂದ ಮನೆಗೆ ಹಿಂದಿರುಗುವ ದಾರಿಯಲ್ಲಿ ತಮ್ಮ ಪರ್ಸನ್ನು ಎಲ್ಲೋ ಕಳೆದುಕೊಂಡಿದ್ದರೂ ಅವರಿಗೆ ಅದು ತಿಳಿದಿರಲಿಲ್ಲ. ಮರುದಿನ ಚುನಾವಣೆ ಇದ್ದುದರಿಂದ ಅವರು ಆ ವಿಚಾರದಲ್ಲಿಯೇ ವ್ಯಸ್ತರಾಗಿದ್ದರು. ಸೋಮವಾರ ಬೆಳಗ್ಗೆ ಕಚೇರಿಗೆ ಹೊರಡಬೇಕೆನ್ನುವಷ್ಟರಲ್ಲಿ ಪರ್ಸ್ ನೆನಪಾಗಿ ಅದಕ್ಕಾಗಿ ಹುಡುಕಾಡಿದಾಗ ಅದು ಮನೆಯಲ್ಲಿರಲಿಲ್ಲ. ಅದರಲ್ಲಿ ತನ್ನ ಎಟಿಎಂ ಪಿನ್ ಇರುವ ಬ್ಯಾಂಕ್ ನೀಡಿದ್ದ ಚೀಟಿ ಇದ್ದಿದ್ದು ಪಕ್ಕನೆ ನೆನಪಾಗಿ ಮೊಬೈಲ್ ಪರಿಶೀಲಿಸಿದಾಗ ರೂ.18,000 ಹಿಂಪಡೆದಿದ್ದ ಬಗ್ಗೆ ಅದರಲ್ಲಿ ಸಂದೇಶವಿತ್ತು. ಅವರು ಬ್ಯಾಂಕಿನಲ್ಲಿ ವಿಚಾರಿಸಿದಾಗ ಹಝ್ರತ್ ಗಂಜ್ ಪ್ರದೇಶದ ಯಾವುದೋ ಎಟಿಎಂನಿಂದ ಹಣ ಪಡೆಯಲಾಗಿದೆ ಎಂಬ ಮಾಹಿತಿ ದೊರಕಿತು.
ಈ ಬಗ್ಗೆ ಶರ್ಮ ಪೊಲೀಸ್ ದೂರು ದಾಖಲಿಸಿದ್ದಾರೆ. ಶರ್ಮ ಅವರ ಡೆಬಿಟ್ ಕಾರ್ಡಿನ ಮ್ಯಾಗ್ನೆಟಿಕ್ ಸ್ಟ್ರಿಪ್ ನಲ್ಲಿ ಏನೋ ಸಮಸ್ಯೆಯಿದ್ದುದರಿಂದ ಅವರು ಹೊಸ ಡೆಬಿಟ್ ಕಾರ್ಡ್ ಗೆ ಡಿಸೆಂಬರ್ ತಿಂಗಳಿನಲ್ಲಿಯೇ ಅರ್ಜಿ ಸಲ್ಲಿಸಿದ್ದರು. ಆದರೆ ಬ್ಯಾಂಕ್ ಕೊರಿಯರ್ ಮೂಲಕ ಕಳುಹಿಸಿದ ಎಟಿಎಂ ಪಿನ್ ಇರುವ ಕಾಗದವನ್ನು ಅವರು ಹಾಗೆಯೇ ತಮ್ಮ ಪರ್ಸ್ ನಲ್ಲಿಟ್ಟಿದ್ದೇ ಅವರೀಗ ಹಣ ಕಳೆದುಕೊಳ್ಳಲು ಕಾರಣವಾಗಿದೆ.





