'ಕರಾವಳಿ ಸೌಹಾರ್ದ ರ್ಯಾಲಿ' ಯಶಸ್ಸಿಗೆ ವಿವಿಧ ಸಂಘಟನೆಗಳ ಕರೆ
ಮಂಗಳೂರು, ಫೆ.23: ದ.ಕ ಜಿಲ್ಲೆಯಲ್ಲಿ ಶಾಂತಿ ಸಾಮರಸ್ಯವನ್ನು ಕಾಪಾಡುವ ಸಲುವಾಗಿ ಫೆ.25ರಂದು ಆಯೋಜಿಸಲಾಗಿರುವ 'ಕರಾವಳಿ ಸೌಹಾರ್ದ ರ್ಯಾಲಿ'ಯನ್ನು ಯಶಸ್ಸಿಗೊಳಿಸಲು ವಿವಿದ ಸಂಘಟನೆಗಳು ಕರೆ ನೀಡಿವೆ.
*ಸಿಐಟಿಯು: ಕರಾವಳಿ ಜಿಲ್ಲೆಗಳಲ್ಲಿ ಕಾರ್ಮಿಕ ವರ್ಗ ವಿವಿಧ ಕೈಗಾರಿಕೆ, ಕಾರ್ಖಾನೆ, ಉದ್ಯಮಗಳಲ್ಲಿ ಒಂದುವರೆ ಶತಮಾನಗಳಿಂದ ಹಿಂದೂ, ಮುಸ್ಲಿಮ್, ಕ್ರೈಸ್ತ ಇತ್ಯಾದಿ ಭೇದವಿಲ್ಲದೆ ಈ ಜಿಲ್ಲೆಗಳ ಸಂಪತ್ತನ್ನು ಹೆಚ್ಚಿಸುವಲ್ಲಿ ಶ್ರಮಿಸುತ್ತಾ ಬಂದಿದ್ದಾರೆ. ಆದರೆ ಹಿಂದುತ್ವದ ಶಕ್ತಿಗಳು ಕಳೆದ 60-70 ವರ್ಷಗಳಿಂದಲೂ ಕಾರ್ಮಿಕ ವರ್ಗವನ್ನು ವಿಭಜಿಸಲು ಧರ್ಮದ ಹೆಸರಿನಲ್ಲಿ ಪ್ರಯತ್ನಿಸುತ್ತಿವೆ. ಕೇರಳ ಮುಖ್ಯಮಂತ್ರಿ ಪಿಣರಾಯ್ ವಿಜಯನ್‌ರ ಭೇಟಿಯನ್ನು ತಡೆಯಬೇಕು ಮತ್ತು ಸೌಹಾರ್ದ ರ್ಯಾಲಿಯ ದಿನ ದ.ಕ ಜಿಲ್ಲೆಯಲ್ಲಿ ಹರತಾಳ ಆಚರಿಸಬೇಕು ಎಂದು ಸಂಘ ಪರಿವಾರದ ಸಂಘಟನೆಗಳು ಕರೆಕೊಟ್ಟಿವೆ. ಆದರೆ ಈ ಸಂಚನ್ನು ವಿಫಲಗೊಳಿಸಿ ಈ ಸೌಹಾರ್ದ ರ್ಯಾಲಿಯನ್ನು ಯಶಸ್ಸುಗೊಳಿಸಬೇಕು ಎಂದು ಸಿಐಟಿಯು ದ.ಕ. ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್ ಮನವಿ ಮಾಡಿದ್ದಾರೆ.
*ದಸಂಸ: ಕರಾವಳಿ ಸೌಹಾರ್ದ ರ್ಯಾಲಿಯ ಬಹಿರಂಗ ಸಭೆಗೆ ಆಗಮಿಸುತ್ತಿರುವ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ರನ್ನು ತಡೆಯಲು ಹಾಗೂ ರ್ಯಾಲಿ ದಿನ ದ.ಕ ಜಿಲ್ಲೆಯನ್ನೇ ಬಂದ್ ಮಾಡಲು ಸಂಘಪರಿವಾರದ ಸಂಘಟನೆಗಳು ಕರೆ ಕೊಟ್ಟಿರುವುದು ಖಂಡನೀಯ. ಪ್ರಜಾಪ್ರಭುತ್ವವಾದಿ ಶಕ್ತಿಗಳು ಶಾಂತಿ ಸೌಹಾರ್ದ ಪ್ರೇಮಿಗಳೂ ಒಟ್ಟಾಗಿ ಹಿಂದುತ್ವದ ಸಂಚನ್ನು ವಿಫಲಗೊಳಿಸಬೇಕಾಗಿದೆ.
ಸಿಪಿಎಂ ಹಮ್ಮಿಕೊಂಡಿರುವ ಸೌಹಾರ್ದ ರ್ಯಾಲಿಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ದಲಿತ ಸಂಘರ್ಷ ಸಮಿತಿ (ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ)ಯ ರಾಜ್ಯ ಸಂಘಟನಾ ಸಂಚಾಲಕ ಎಂ. ದೇವದಾಸ್ ಹಾಗೂ ದ.ಕ. ಜಿಲ್ಲಾ ಸಂಚಾಲಕ ರಘು ಎಕ್ಕಾರ್ ಕರೆ ನೀಡಿದ್ದಾರೆ.
*ಮಾನವ್ ಸಮಾನತಾ ಮಂಚ್: ಸೌಹಾರ್ದ ರ್ಯಾಲಿಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆಗಮಿಸುತ್ತಿರುವುದನ್ನು ವಿರೋಧಿಸಿ ಬಿಜೆಪಿ, ವಿಶ್ವ ಹಿಂದೂ ಪರಿಷತ್, ಸಂಘಪರಿವಾರ ಹಾಗೂ ಅದರ ಸಹ ಸಂಘಟನೆಗಳು ಫೆ.25ರಂದು ಹರತಾಳ ಆಚರಿಸಲು ಕರೆ ಕೊಟ್ಟಿರುವುದು ಬಿಜೆಪಿಯ ಹತಾಶೆಯನ್ನು ತೋರಿಸುತ್ತದೆ. ಜನಸಾಮಾನ್ಯರು ಹಾಗೂ ವಿದ್ಯಾರ್ಥಿಗಳ ಮೇಲೆ ಆಗುವ ದುಷ್ಪರಿಣಾಮಗಳನ್ನು ಲೆಕ್ಕಿಸದೆ ಹರತಾಳ ಆಚರಿಸಲು ಕರೆ ಕೊಟ್ಟಿರುವುದು ಬಿಜೆಪಿಗೆ ದೇಶದ ಜನತೆಯ ಮೇಲೆ ಇರುವ ಕಾಳಜಿಗೆ ಕನ್ನಡಿ ಹಿಡಿದಂತಿದೆ.
ಒಂದು ರಾಜ್ಯದ ಮುಖ್ಯಮಂತ್ರಿಯ ಭೇಟಿಯನ್ನು ವಿರೋಧಿಸುವುದು ಸಂವಿಧಾನದ ಆಶಯಗಳಿಗೆ ವಿರೋಧವಾಗಿದ್ದು ಈ ಮೂಲಕ ಬಿಜೆಪಿ ಮತ್ತು ಅದರ ಸಹ ಸಂಘಟನೆಗಳು ಸಂವಿಧಾನವನ್ನು ಅವಮಾನಿಸುವ ಜೊತೆಗೆ ಸೌಹಾರ್ದವನ್ನು ಕೋಮುಗಲಭೆಗೆ ಪರಿವರ್ತಿಸಿ ಜಿಲ್ಲೆಯ ಜನರನ್ನು ಒಡೆಯುವ ಹಾಗೂ ತಪ್ಪುದಾರಿಗೆಳೆಯುವ ಹುನ್ನಾರ ನಡೆಸುತ್ತಿದ್ದಾರೆ ಎಂದು ಸಂಘದ ಪದಾಧಿಕಾರಿಗಳಾದ ಅಲಿ ಹಸನ್, ವಸಂತ್ ಟೈಲರ್, ರೋಶನ್ ಪತ್ರಾವೊ, ಮುಹಮ್ಮದ್ ಸಾಲಿ, ಮೋಹನ್ ಎಂ., ಗೋಲ್ಡ್‌ನ್ ಡಿಸೋಜ ಮತ್ತಿತರರು ಪತ್ರಿಕಾ ಹೇಳಿಕೆಯಲ್ಲಿ ಆರೋಪಿಸಿದ್ದಾರೆ.







