ಮುಂಬೈ ಸ್ಥಳೀಯ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಸಂಜಯ್ ನಿರುಪಮ್ ರಾಜೀನಾಮೆ
ಬಿಎಂಸಿಯಲ್ಲಿ ನೀರಸ ಪ್ರದರ್ಶನ ಹಿನ್ನೆಲೆ

ಮುಂಬೈ, ಫೆ.22: ಬೃಹನ್‌ಮುಂಬೈ ಮಹಾನಗರಪಾಲಿಕೆಯಲ್ಲಿ ಶಿವಸೇನೆ ಅಧಿಕಾರವನ್ನು ಉಳಿಸಿಕೊಳ್ಳುವುದು ಸ್ಪಷ್ಟವಾಗಿದ್ದು, ಪ್ರತಿಪಕ್ಷ ಕಾಂಗ್ರೆಸ್ ಬಿಎಂಸಿ ಸೇರಿದಂತೆ ರಾಜ್ಯದ ಉಳಿದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ನೀರಸ ಫಲಿತಾಂಶ ದಾಖಲಿಸಿದೆ. ಮುಂಬೈನಲ್ಲಿ ಪಕ್ಷದ ಕಳಪೆ ಸಾಧನೆಯ ಹಿನ್ನೆಲೆಯಲ್ಲಿ ಮುಂಬೈ ಸ್ಥಳೀಯ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಸಂಜಯ್ ನಿರುಪಮ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಕೆಲವು ವರ್ಷಗಳ ಹಿಂದೆ ಶಿವಸೇನೆಯಿಂದ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದ ನಿರುಪಮ್ ಅವರು ಬಿಎಂಸಿಯಲ್ಲಿ ಕಾಂಗ್ರೆಸ್ ಕೇವಲ 22 ವಾರ್ಡ್‌ಗಳಲ್ಲಿ ಮುನ್ನಡೆ ಸಾಧಿಸಿರುವ ಹಿನ್ನೆಲೆಯಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ.
93 ಸೀಟುಗಳಲ್ಲಿ ಮುನ್ನಡೆಯಲ್ಲಿರುವ ಶಿವಸೇನೆ ಅಧಿಕಾರವನ್ನು ತನ್ನಲ್ಲೇ ಉಳಿಸಿಕೊಳ್ಳುವುದು ಸ್ಪಷ್ಟವಾಗಿದೆ.
ಶಿವಸೇನೆ ಮೈತ್ರಿಯನ್ನು ಕಳೆದುಕೊಂಡಿರುವ ಬಿಜೆಪಿ 66 ಸ್ಥಾನಗಳಲ್ಲಿ ಮುನ್ನಡೆಯಲ್ಲಿದ್ದು, ಎರಡನೆ ಸ್ಥಾನದಲ್ಲಿದೆ. ಕಾಂಗ್ರೆಸ್ 3ನೆ ಸ್ಥಾನದಲ್ಲಿದೆ.
ಶಿವಸೇನೆ-ಬಿಜೆಪಿ ಕಾರ್ಯಕರ್ತರ ಹೊಡೆದಾಟ:
ಶಿವಸೇನೆ ಹಾಗೂ ಬಿಜೆಪಿ ಕಾರ್ಯಕರ್ತರು ದಾದರ್‌ನಲ್ಲಿರುವ ಬಿಜೆಪಿಯ ಪ್ರಧಾನ ಕಚೇರಿಯ ಹೊರಗೆ ಪರಸ್ಪರ ಹೊಡೆದಾಡಿಕೊಂಡಿರುವ ಘಟನೆ ನಡೆದಿದೆ.





