ಮಾಜಿ ಬಿಜೆಪಿ ಶಾಸಕನ ವಿರುದ್ಧ ರೇಪ್ ಕೇಸ್

ಗುರುಗ್ರಾಮ್, ಫೆ.23 : ಮಾಜಿ ಬಿಜೆಪಿ ಶಾಸಕ ವಿಜಯ್ ಜೊಲ್ಲಿ ಅವರು ತನಗೆ ಅಮಲುಭರಿತ ಪಾನೀಯ ನೀಡಿ ತನ್ನ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಮಹಿಳೆಯೊಬ್ಬಳು ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ಮಾಜಿ ಶಾಸಕನ ವಿರುದ್ಧ ಬುಧವಾರ ಪ್ರಕರಣ ದಾಖಲಿಸಿದ್ದಾರೆ.
ವಿಜಯ್ ಜೊಲ್ಲಿ ತನ್ನ ಮೇಲೆ ಗುರ್ಗಾಂವ್ ನ ಅಪ್ನೊ ಘರ್ ರಿಸಾರ್ಟ್ ನಲ್ಲಿ ಫೆಬ್ರವರಿ 10ರ ಅಪರಾಹ್ನ ಅತ್ಯಾಚಾರ ನಡೆಸಿದ್ದಾರೆ ಎಂದು ದಕ್ಷಿಣ ದಿಲ್ಲಿಯ ನಿವಾಸಿಯಾಗಿರುವ ಮಹಿಳೆ ತನ್ನ ದೂರಿನಲ್ಲಿ ತಿಳಿಸಿದ್ದಾಳೆ. ತನ್ನೊಂದಿಗೆ ಮಾತನಾಡುವುದಿದೆ ಎಂಬ ನೆಪದಲ್ಲಿ ವಿಜಯ್ ಜೊಲ್ಲಿ ತನ್ನನ್ನು ವಾಹನವೊಂದರಲ್ಲಿ ಕರೆದುಕೊಂಡು ಹೋಗಿ ನಂತರ ಈ ಕೃತ್ಯ ಎಸಗಿದ್ದಾರೆಂದು ಆಕೆ ಆರೋಪಿಸಿದ್ದಾಳೆ. ಆಕೆ ದೂರಿನಲ್ಲಿ ತಿಳಿಸಿದಂತೆ ಆಕೆಗೆ ಅಲ್ಲಿ ಟೊಮ್ಯಾಟೋ ಜ್ಯೂಸ್ ನೀಡಲಾಗಿತ್ತು. ಅದನ್ನು ಕುಡಿದು 15 ನಿಮಿಷಗಳಾಗುವಷ್ಟರ ಹೊತ್ತಿಗೆ ತಾನು ತಲೆ ತಿರುಗಿ ಬಿದ್ದೆ, ಎಚ್ಚರವಾಗ ಮೈಮೇಲೆ ಬಟ್ಟೆಯಿರಲಿಲ್ಲ ಎಂದು ಆಕೆ ಹೇಳಿಕೊಂಡಿದ್ದಾಳೆ.
ಪೊಲೀಸರು ಈ ಪ್ರಕರಣ ತನಿಖೆ ನಡೆಸುತ್ತಿರುವಂತೆಯೇ ತನ್ನ ವಿರುದ್ಧದ ಆರೋಪ ಸುಳ್ಳು ಎಂದು ಹೇಳಿರುವ ವಿಜಯ್ ಜೊಲ್ಲಿ, ಇದು ತನ್ನಿಂದ ಹಣ ವಸೂಲಿ ಮಾಡುವ ತಂತ್ರ ಎಂದಿದ್ದಾರೆ. ‘‘ಆ ಮಹಿಳೆ ಹಲವು ಮಂದಿಯಿಂದ ಹಣ ಪಡೆದಿದ್ದಾಳೆ. ನನ್ನನ್ನು ಫೆಬ್ರವರಿ 10ರಂದು ಆಪ್ನೊ ಘರ್ ಗೆ ಬರಲು ಹೇಳಿ ರೂ. 5 ಲಕ್ಷ ಬೇಡಿಕೆಯಿರಿಸಿದ್ದಳು. ನಾನು ನಿರಾಕರಿಸಿದಾಗ ಆಕೆ ನನಗೆ ಕಳಂಕ ತರುವುದಾಗಿ ಬೆದರಿಸಿದ್ದಳು. ಅದೇ ದಿನ ನಾನು ವಿದೇಶಕ್ಕೆ ಹೋಗಿದ್ದೆ. ಹಿಂದಿರುಗಿ ಬರುವಾಗ ಆಕೆಯ ಪತಿ ನನ್ನ ಸ್ನೇಹಿತರು ಹಾಗೂ ಕುಟುಂಬದವರನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾನೆಂದು ತಿಳಿಯಿತು. ಇದನ್ನು ವಿರೋಧಿಸಿ ನಾನು ಫೆಬ್ರವರಿ 17ರಂದು ದಂಪತಿಯ ವಿರುದ್ಧ ಧೂರು ದಾಖಲಿಸಿದ್ದೇನೆ ಎಂದು ಅವರು ತಿಳಿಸಿದ್ದಾರೆ.