ತಿರುವನಂತಪುರಂ ವೈದ್ಯಕೀಯ ಕಾಲೇಜಿನಲ್ಲಿ ನಕಲಿ ವೈದ್ಯೆ: ಬಂಧನ

ತಿರುವನಂತಪುರಂ,ಫೆ. 23: ಇಲ್ಲಿನ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ವೈದ್ಯೆಯೆಂದು ಹೇಳಿಕೊಂಡ ಯುವತಿಯನ್ನು ಪಿಜಿ ವೈದ್ಯರ ವಿಶ್ರಾಂತಿ ಕೋಣೆಯಿಂದ ಬುಧವಾರ ಬೆಳಗ್ಗೆ ಪೊಲೀಸರು ಬಂಧಿಸಿದ್ದಾರೆ. ಎರಡು ದಿವಸಗಳ ಹಿಂದೆ ಇದೇ ಕೋಣೆಯಿಂದ ಪಿಜಿ ವೈದ್ಯರ ಬ್ಯಾಗ್‌ನಿಂದ 2000ರೂಪಾಯಿ ಕಾಣೆಯಾಗಿತ್ತು. ಆ ಸಮಯದಲ್ಲಿ ಈಕೆ ಅಲ್ಲಿದ್ದಳು. ಯುವತಿಯನ್ನು ನೀನು ಯಾರೆಂದು ಕೇಳಿದಾಗ ತಾನು ಪಿಜಿ ವೈದ್ಯೆ ಎಂದು ಹೇಳಿ ಹೊರಟು ಹೋಗಿದ್ದಳು. ನಂತರ ಬುಧವವಾರವೂ ಈ ಯುವತಿ ಇದೇ ಕೋಣೆಯಲ್ಲಿ ಕಂಡುಬಂದಾಗ ಪಿಜಿ ವೈದ್ಯರು ಸುರಕ್ಷ ವಿಭಾಗಕ್ಕೆ ತಿಳಿಸಿದ್ದರು.
ಸುರಕ್ಷ ವಿಭಾಗದ ಉದ್ಯೋಗಿ ಏಯ್ಡೋ ಪೋಸ್ಟ್‌ನ ಪೊಲೀಸರನ್ನು ಕರೆತಂದು ಅವಳನ್ನು ಪ್ರಶ್ನಿಸಿದಾಗ ಆಗಲೂತಾನು ಪಿಜಿವೈದ್ಯೆ ಎಂದೇ ಅವಳು ಹೇಳಿದ್ದಳು. ಐಡಿಂಟಿಟಿ ಕಾರ್ಡು ಕೇಳಿದಾಗ ಅವಳು ಕೊಡಲು ಸಿದ್ಧಳಾಗಲಿಲ್ಲ.
ಇದರಿಂದಾಗಿ ಸಂದೇಹಗೊಂಡ ಪೊಲೀಸ್ ಕಾನ್‌ಸ್ಟೇಬಲ್ ವೈದ್ಯಕೀಯ ಕಾಲೇಜು ಪೊಲೀಸ್ ಠಾಣೆಗೆ ಸುದ್ದಿ ಮುಟ್ಟಿಸಿದ್ದರು. ಪೊಲೀಸರು ತನಿಖೆ ಮಾಡಿದಾಗ ಅವಳು ತಡವರಿಸಿದ ಹಿನ್ನೆಲೆಯಲ್ಲಿ ಠಾಣೆಗೆ ಕರೆದುಕೊಂಡು ಹೋಗಿ ಪ್ರಶ್ನಿಸಲಾಯಿತು.
ಯುವತಿಯ ಬಳಿಯಿದ್ದ ನಕಲಿ ಐಡಿ ಕಾರ್ಡ್, 10 ಕೇಸು ಶೀಟ್‌ಗಳು, ಸ್ಟೆತಸ್ಕೋಪ್, ಎರಡು ಮೊಬೈಲ್ ಫೋನ್‌ಗಳನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ. ವೈದ್ಯೆಯ ವೇಷ ತೊಟ್ಟದ್ದಕ್ಕೆ, ಕೇಸುಶೀಟ್ ಕದ್ದದಕ್ಕೆ ಯುವತಿಯ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಆಸ್ಪತ್ರೆಯ ಅಧಿಕಾರಿಗಳು ಯುವತಿಯ ವಿರುದ್ಧ ದೂರು ನೀಡಿದ್ದಾರೆಂದು ವರದಿ ತಿಳಿಸಿದೆ.