ರ‍್ಯಾಲಿಗೆ ಪಿಣರಾಯಿ ವಿಜಯನ್ ಬರುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ:ವಸಂತ್ ಆಚಾರಿ
ಸಿಪಿಐಎಂ ಕಚೇರಿಗೆ ಬೆಂಕಿ ಹಚ್ಚಿದ ಘಟನೆ ಖಂಡಿಸಿ ತೊಕ್ಕೊಟ್ಟುವಿನಲ್ಲಿ ಪ್ರತಿಭಟನೆ
ಉಳ್ಳಾಲ, ಫೆ.23: : ಮಂಗಳೂರಿನಲ್ಲಿ ನಡೆಯುವ ಸೌಹಾರ್ದ ರ‍್ಯಾಲಿಯಲ್ಲಿ ಭಾಗವಹಿಸಲು ಕೇರಳದ ಮುಖ್ಯಮಂತ್ರಿ ಆಗಮಿಸುವುದನ್ನು ಸಹಿಸದ ಸಂಘ ಪರಿವಾರ ಮತ್ತು ಬಿಜೆಪಿಯು ಬಂದ್‌ಗೆ ಕರೆ ನೀಡಿ ವಿವಿದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ತಡೆಯೊಡ್ಡಲು ಪ್ರಯತ್ನಿಸುತ್ತಿದೆ. ಇದರ ಮುಂದುವರಿಕಾ ಭಾಗವಾಗಿ ತೊಕ್ಕೊಟ್ಟುವಿನ ಸಿಪಿಎಂ ಕಚೇರಿಯಲ್ಲಿ ಬೆಂಕಿ ಘಟನೆ ನಡೆದಿದ್ದು, ಯಾರು ಏನೇ ಮಾಡಿದರೂ ಸೌಹಾರ್ದ ರ‍್ಯಾಲಿಯಲ್ಲಿ ಕೇರಳದ ಮುಖ್ಯಮಂತ್ರಿಯವರು ಭಾಗವಹಿಸುವುದನ್ನು ತಡೆಯಲು ಸಾಧ್ಯವಿಲ್ಲ. ಅವರು ಕಾರ್ಯಕ್ರಮದಲ್ಲಿ ಭಾಗವಹಿಸುವುದು ನಿಶ್ಚಿತ ಎಂದು ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ವಸಂತ ಆಚಾರಿ ಹೇಳಿದರು.
ಅವರು ತೊಕ್ಕೊಟ್ಟು ಒಳಪೇಟೆಯ ಸಿಪಿಐಎಂ ಕಚೇರಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ ಪ್ರಕರಣವನ್ನು ಖಂಡಿಸಿ ಗುರುವಾರದಂದು ತೊಕ್ಕೊಟ್ಟುವಿನಲ್ಲಿ ನಡೆದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದರು.
ಆರಂಭದಲ್ಲಿ ಸೌಹಾರ್ದ ರ‍್ಯಾಲಿಯ ಬ್ಯಾನರ್‌ಗಳನ್ನು ಹರಿಯುತ್ತಿದ್ದ ಸಂಘಪರಿವಾರ ಮತ್ತು ಬಿಜೆಪಿಯು ಇದೀಗ ಸಿಪಿಐಎಂ ಪಕ್ಷದ ಕಚೇರಿಗೆ ದಾಳಿ ಮಾಡುವ ಮುಖೇನ ದುಷ್ಕೃತ್ಯಕ್ಕೆ ಕೈ ಹಾಕಿದೆ.
ಜನಪರ ಕೆಲಸ ಮಾಡಲು ಸಂವಿಂಧಾನದ ಚೌಕಟ್ಟಿನಲ್ಲಿ ರಾಜಕೀಯ ನಾಯಕರು ಓಡಾಟ ನಡೆಸುವ ಹಕ್ಕು ನೀಡಲಾಗಿರುವುದನ್ನು ಬಿಜೆಪಿಯಂತಹ ರಾಷ್ಟ್ರೀಯ ಪಕ್ಷವು ಅರಿತಿದ್ದರೂ ಸಂಘಪರಿವಾರದವರೊಡಗೂಡಿ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಂಗಳೂರಿಗೆ ಬರುವುದನ್ನು ತಡೆಯಲು ಹರತಾಳ ನಡೆಸಲು ಹೊರಟಿರುವುದು ಖೇಧಕರ. ನೀವು ಏನೇ ಮಾಡಿದರೂ ನಾವು ಅಂದುಕೊಂಡ ಕಾರ್ಯಕ್ರಮವು ನಡೆದೇ ತೀರುತ್ತದೆ ಎಂದು ಸವಾಲು ಹಾಕಿದರು.
ಸಿಪಿಐಎಂ ಉಳ್ಳಾಲ ವಲಯ ಅಧ್ಯಕ್ಷರಾದ ಕೃಷ್ಣಪ್ಪ ಸಾಲಿಯಾನ್ ಮಾತನಾಡಿ, ಕೋಮು ಸಾಮರಸ್ಯವನ್ನು ಬಲಗೊಳಿಸುವ ದೃಷ್ಟಿಯನ್ನಿರಿಸಿ ಸಿಪಿಐಎಂ ಜಿಲ್ಲಾ ಸಮಿತಿಯಿಂದ ಸೌಹಾರ್ದ ರ‍್ಯಾಲಿ ಹಮ್ಮಿಕೊಳ್ಳಲಾಗಿದ್ದು ಇದನ್ನು ಸಹಿಸದ ಕೋಮುವಾದಿ ಶಕ್ತಿಗಳು ಸಾಮರಸ್ಯದ ಗೂಡಾಗಿರುವ ಪಕ್ಷದ ಕಚೇರಿಗೆ ಬೆಂಕಿ ಹಚ್ಚಿರುವುದು ಖಂಡನೀಯ ಎಂದು ಹೇಳಿದರು.
ಮುಖಂಡರಾದ ಕೆ.ಆರ್ ಶ್ರೀಯಾನ್, ಪದ್ಮಾವತಿ ಶೆಟ್ಟಿ, ಜೀವನ್ ಕುತ್ತಾರು,ಬಾಬು ಪಿಲಾರ್,ಇಬ್ರಾಹಿಂ ಅಂಬ್ಲಮೊಗರು, ಜಯಂತ್ ನಾಯ್ಕಾ ಮೊದಲಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.





.jpg.jpg)



