ಮಂಗಳೂರು ಬಂದ್ ಗೆ ಆಸ್ಪದವಿಲ್ಲ: ಕಮಿಷನರ್ ಚಂದ್ರಶೇಖರ್; ಭದ್ರತೆಗೆ 500 ಸಿಸಿ ಕ್ಯಾಮರಾ, 6 ಡ್ರೋನ್ ಕ್ಯಾಮರಾ ಬಳಕೆ
ಫೆ.25ರಂದು ಮಂಗಳೂರು ಬಂದ್ ಗೆ ಕರೆ ನೀಡಿರುವ ಹಿನ್ನೆಲೆ

ಮಂಗಳೂರು.ಫೆ.23: ಕೇರಳದ ಮುಖ್ಯ ಮಂತ್ರಿ ಜಿಲ್ಲೆಗೆ ಆಗಮಿಸುತ್ತಿರುವ ಸಂದರ್ಭದಲ್ಲಿ ಸೂಕ್ತ ಭದ್ರತಾ ವ್ಯವಸ್ಥೆಯನ್ನು ಕೈಗೊಳ್ಳಲಾಗಿದೆ. ನಗರದ ವಿವಿಧ ಕಡೆಗಳಲ್ಲಿ 600 ಸಿ.ಸಿ ಕ್ಯಾಮಾರಾಗಳನ್ನು ಅಳವಡಿಸಿ ಕಣ್ಗಾವಲು ಇಡಲಾಗಿದೆ.6 ಡ್ರೋಣ್ ಕ್ಯಾಮರಾಗಳ ಮೂಲಕ ಬಂದೋಬಸ್ತು ನಡೆಸಲಾಗುತ್ತದೆ. ಮುಂಜಾಗ್ರತಾ ಕ್ರಮವಾಗಿ 120 ಜನರಿಂದ 5ರಿಂದ 10ಲಕ್ಷವರೆಗೆ ಬಾಂಡ್ ಪಡೆಯಲಾಗಿದೆ. ಇನ್ನು ಹಲವರನ್ನು ಮುಂಜಾಗ್ರತಾ ಕ್ರಮವಾಗಿ ವಶಕ್ಕೆ ಪಡೆಯಲಾಗುವುದು ಎಂದು ಪೊಲೀಸ್ ಕಮೀಶನರ್ ಚಂದ್ರಶೇಖರ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಬಂದ್‌ಗೆ ಕರೆ ನೀಡಲು ಯಾರಿಗೂ ಅವಕಾಶವಿಲ್ಲ. ಸುಪ್ರೀಕೋರ್ಟ್ ನಿರ್ದೇಶನದ ಪ್ರಕಾರ ಬಂದ್ ನಡೆಸಲು ಅವಕಾಶವಿರುವುದಿಲ್ಲ.ಈ ಹಿನ್ನೆಲೆಯಲ್ಲಿ 44 ಜನರಿಗೆ ನೊಟೀಸು ನೀಡಲಾಗಿದೆ.ಕಾನೂನು ಸುವ್ಯವವಸ್ಥೆಗೆ ತೊಂದರೆ ಉಂಟು ಮಾಡಲು ಅವಕಾಶ ನೀಡುವುದಿಲ್ಲ. ಕಾನೂನು ಬಾಹಿರ ಚಟುವಟಿಕೆ ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮಂಗಳೂರು ಪೊಲೀಸ್ ಕಮೀಶನರ್ ಚಂದ್ರಶೇಖರ್ ತಿಳಿಸಿದ್ದಾರೆ.
ಬಂದ್‌ಗೆ ಕರೆ ನೀಡಿಲ್ಲ ಸಂಘಪರಿವಾರದ ಹೇಳಿಕೆ:
ಜಿಲ್ಲೆಯಲ್ಲಿ ಕೇರಳದ ಮುಖ್ಯ ಮಂತ್ರಿಯವರ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ನಾವು ಬಂದ್‌ಗೆ ಕರೆ ನೀಡಿಲ್ಲ ಎಂದು ಹರತಾಳಕ್ಕೆ ಕರೆ ನೀಡಿದ ಸಂಘಟನೆಗಳು ಸ್ಪಷ್ಟನೆ ನೀಡಿರುವುದಾಗಿ ಚಂದ್ರಶೇಖರ್ ತಿಳಿಸಿದ್ದಾರೆ.
ಕೇರಳ ರಾಜ್ಯದ ಮುಖ್ಯಮಂತ್ರಿ ನಗರಕ್ಕೆ ಆಗಮಿಸುತ್ತಿರುವ ಸಂದರ್ಭದಲ್ಲಿ ಸೂಕ್ತ ಬಂದೋಬಸ್ತು ಮಾಡಲಾಗುವುದು. ಕಾರ್ಯಕ್ರಮ ನಡೆಸುವವರಿಗೆ ಸೂಕ್ತ ರಕ್ಷಣೆ ನೀಡಲಾಗುವುದು.ಕಾನೂನು ಬಾಹಿರವಾಗಿ ಯಾವೂದೇ ಚಟುವಟಿಕೆ ನಡೆಸುವವರ ಬಗ್ಗೆ ನಿಗಾವಹಿಸಿ ಸೂಕ್ತ ಕ್ರಮ ಕೈ ಗೊಳ್ಳಲು ಸೂಚನೆ ನೀಡಲಾಗಿದೆ ಎಂದು ಪೊಲೀಸ್ ಕಮೀಶನರ್ ತಿಳಿಸಿದ್ದಾರೆ.
ಜಿಲ್ಲೆಗೆ ಹೆಚ್ಚುವರಿ ಪೊಲೀಸರು:
ಜಿಲ್ಲೆಯಲ್ಲಿ ಸೂಕ್ತ ಬಂದೋಬಸ್ತು ವ್ಯವಸ್ಥೆ ನಿರ್ವಹಿಸಲು ಹೊರ ಜಿಲ್ಲೆಗಳಿಂದ ಸುಮಾರು 2,000 ಪೊಲೀಸರು,20ಕೆ.ಎಸ್‌ಆರ್.ಪಿ ತುಕಡಿ ಶೀಘ್ರದಲ್ಲಿ ಜಿಲ್ಲೆಗೆ ಆಗಮಿಸಿ ಕಾರ್ಯನಿರ್ವಹಿಸಲಿದ್ದಾರೆ.ಜಿಲ್ಲೆಯ 1,500 ಪೊಲೀಸರನ್ನು ನಿಯೋಜಿಸಲಾಗಿದೆ.6ಎಸ್‌ಪಿ,10ಡಿವೈಎಸ್‌ಪಿ,20 ಪೊಲೀಸ್ ಇನ್ಸ್‌ಪೆಕ್ಟರ್‌ಗಳು ನಗರದಲ್ಲ ಕಾರ್ಯನಿರ್ವಹಿಸಲಿದ್ದಾರೆ ಎಂದು ಪೊಲೀಸ್ ಕಮೀಶನರ್ ತಿಳಿಸಿದ್ದಾರೆ.
ಜಿಲ್ಲೆಯಲ್ಲೂ ಕೆಎಸ್‌ಆರ್‌ಪಿ ತುಕಡಿ:
ಗ್ರಾಮಾಂತರ ಪ್ರದೇಶದಲ್ಲೂ ಯಾವೂದೇ ಅಹಿತಕರ ಘಟನೆ ನಡೆಯದಂತೆ 6ಕೆಎಸ್‌ಆರ್‌ಪಿ ತುಕಡಿಗಳು 10 ಜಿಲ್ಲಾ ಸಶಸ್ತ್ರ ಪಡೆಯ ತುಕಡಿಗಳು ಕಾರ್ಯನಿರ್ವಹಿಸಲಿವೆ. 20 ಕ್ಷಿಪ್ರ ಕಾರ್ಯಾಚರಣೆಯ ಪಡೆಗಳು, 10 ಗಸ್ತು ವಾಹನಗಳನ್ನು ಮತ್ತು 17 ಚೆಕ್ ಪೋಸ್ಟ್‌ಗಳಲ್ಲಿ ಸಿಸಿ ಟಿವಿ ಅಳವಡಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಗುಲಾಬ್ ರಾವ್ ಬೊರಸೆ ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣಗಳ ಮೇಲೂ ನಿಗಾ:
ಸಾಮಾಜಿಕ ಜಾಲ ತಾಣಗಳಲ್ಲಿ ಬರುವ ವದಂತಿಗಳಿಗೆ ಕಿವಿಗೊಡಬೇಡಿ, ಅದನ್ನು ಇನ್ನೊಬ್ಬರಿಗೆ ಶೇರ್ ಮಾಡಲು ಹೋಗಬೇಡಿ ಈ ರೀತಿಯ ಚಟುವಟಿಕೆಗಳ ಮೇಲೂ ನಿಗಾ ವಹಿಸಲಾಗುವುದು. ಯಾವೂದೇ ಸಂದೇಹಗಳಿದ್ದರೆ ಪೊಲೀಸ್ ಇಲಾಖೆಯ ಗಮನಕ್ಕೆ ತಂದು ಸಂದೇಹ ಪರಿಹಾರ ಮಾಡಿಕೊಳ್ಳಬಹುದು.
ಬಸ್ ಪ್ರಯಾಣಿಕರಿಗೆ ತೊಂದರೆ ಒಡ್ಡಿದವರ ಮೇಲೂ ಕ್ರಮ:
ಬಸ್ ಪ್ರಯಾಣಿಕರಿಗೆ ಸಂಚಾರಕ್ಕೆ ತೊಂದರೆ ಒಡ್ಡುವವರ ವಿರುದ್ಧ ನಿಗಾವಹಿಸಿ ಕ್ರಮ ಕೈಗೊಳ್ಳಲಾಗುವುದು. ಪ್ರತಿಭಟನಾ ಕಾರರು ಈ ಬಗ್ಗೆ ಅಡ್ಡಿಪಡಿಸುವುದಿಲ್ಲ ಎಂದು ಹೇಳಿಕೆ ನೀಡಿರುವುದಾಗಿ ಚಂದ್ರಶೇಖರ್ ತಿಳಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಡಿಸಿಪಿ ಸಂಜೀವ ಪಾಟೀಲ್,ಶಾಂತರಾಜು ಉಪಸ್ಥಿತರಿದ್ದರು.







