ಕೊಲೆ ಯತ್ನ ಪ್ರಕರಣ: ಓರ್ವ ಅಪರಾಧಿಗೆ ಜೀವಾವಧಿ, ಇನ್ನೋರ್ವನಿಗೆ 2 ವರ್ಷ ಕಠಿಣ ಸಜೆ

ಮಂಗಳೂರು, ಫೆ. 23: ವ್ಯಕ್ತಿಯೊಬ್ಬನ ಕೊಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಇಲ್ಲಿನ ನ್ಯಾಯಾಲಯವು ಮೊದಲ ಅಪರಾಧಿಗೆ ಜೀವಾವಧಿ ಶಿಕ್ಷೆ ಹಾಗೂ ಎರಡನೆ ಅಪರಾಧಿಗೆ ಎರಡು ವರ್ಷಗಳ ಕಠಿಣ ಸಜೆ ವಿಧಿಸಿ ತೀರ್ಪು ನೀಡಿದೆ.
ಪಡು ಮಾರ್ನಾಡು ನಿವಾಸಿ ಕಿರಣ್ ಶೆಟ್ಟಿ (27) ಮತ್ತು ಆತನಿಗೆ ಸಹಕಾರ ನೀಡಿದ ಪಡುಮಾರ್ನಾಡು ಬಸವನಕಜೆ ನಿವಾಸಿ ಜೇಮ್ಸ್ ವಿನೋದ್ (27)ಅಪರಾಧಿಗಳೆಂದು ನ್ಯಾಯಾಲಯ ಘೋಷಿಸಿದೆ.
ಪಡುಮಾರ್ನಾಡು ಬಸವನಕಜೆ ನಿವಾಸಿ ರತ್ನಾಕರ್ ಮಾಬೆನ್ (67) ಮಾರಣಾಂತಿಕ ಹಲ್ಲೆಗೊಳಗಾದವರು. ರತ್ನಾಕರ್ ಮಾಬೆನ್‌ರ ಪುತ್ರಿಗೆ ಕಿರಣ್ ಶೆಟ್ಟಿ ಕೀಟಲೆ ನೀಡಿದ್ದರ ವಿರುದ್ಧ ಮಾಬೆನ್ ಪೊಲೀಸರಿಗೆ ದೂರು ನೀಡಿದ್ದರು. ಇದರಿಂದ ಆಕ್ರೋಶಗೊಂಡ ಕಿರಣ್, ಮಾಬೆನ್‌ರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ.
ಅಪರಾಧಿ ಕಿರಣ್ ಶೆಟ್ಟಿಗೆ ಕೊಲೆಗೆ ಯತ್ನಿಸಿದ ಆರೋಪದ ಮೇಲೆ ಜೀವಾವಧಿ ಶಿಕ್ಷೆ ಮತ್ತು 10 ಸಾವಿರ ರೂ. ದಂಡ, ದಂಡ ತೆರಲು ತಪ್ಪಿದಲ್ಲಿ 6 ತಿಂಗಳು ಸಜೆ. ಮಾರಕಾಯುಧದಿಂದ ಹಲ್ಲೆ ಮಾಡಿದಕ್ಕೆ 7ವರ್ಷ ಕಠಿಣ ಸಜೆ, 10 ಸಾವಿರ ರೂ. ದಂಡ, ದಂಡ ತೆರಲು ತಪ್ಪಿದಲ್ಲಿ 6 ತಿಂಗಳ ಸಜೆ. ಅಕ್ರಮವಾಗಿ ತಡೆದು ನಿಲ್ಲಿಸಿದ ಪ್ರಕರಣಕ್ಕೆ ಸಂಬಂಧಿಸಿ 1 ತಿಂಗಳ ಸಜೆ ಮತ್ತು 500 ರೂ. ದಂಡ, ದಂಡ ತೆರಲು ತಪ್ಪಿದಲ್ಲಿ 15 ದಿವಸ ಸಜೆ ವಿಧಿಸಿ ನ್ಯಾಯಾಮೂರ್ತಿ ಸಿ.ಎಂ. ಜೋಷಿ ತೀರ್ಪು ನೀಡಿದ್ದಾರೆ.
ಕಿರಣ್ ಶೆಟ್ಟಿಗೆ ಸಹಕಾರ ನೀಡಿದ ಆರೋಪದ ಮೇಲೆ ಜೇಮ್ಸ್ ವಿನೋದ್‌ಗೆ 2 ವರ್ಷ ಕಠಿಣ ಸಜೆ ಮತ್ತು 5 ಸಾವಿರ ರೂ. ದಂಡ, ದಂಡ ತೆರಲು ತಪ್ಪಿದಲ್ಲಿ 3 ತಿಂಗಳ ಸಜೆ. ಅಕ್ರಮವಾಗಿ ತಡೆದು ನಿಲ್ಲಿಸಿದ ಆರೋಪದ ಮೇಲೆ 1 ತಿಂಗಳ ಸಜೆ ಮತ್ತು 500 ರೂ. ದಂಡ, ದಂಡ ತೆರಲು ತಪ್ಪಿದಲ್ಲಿ 15 ದಿನ ಸಜೆ ವಿಧಿಸಿ ನ್ಯಾಯಾಧೀಶರು ತೀರ್ಪು ನೀಡಿದ್ದಾರೆ.
ಅಪರಾಧಿಗಳಿಂದ ವಸೂಲಾದ ದಂಡದ ಹಣದಿಂದ 10 ಸಾವಿರ ರೂ. ರತ್ನಾಕರ್ ಮಾಬೆನ್‌ಗೆ ಪರಿಹಾರವಾಗಿ ನೀಡಬೇಕು ಮತ್ತು ಮಾಬೆನ್ ಖಾಯಂ ಅಂಗವಿಕಲತೆಗೆ ಗುರಿಯಾಗಿರುವುದರಿಂದ ಅವರು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಪರಿಹಾರ ಪಡೆದುಕೊಳ್ಳಲು ಅರ್ಹರು ಎಂದು ಆದೇಶದಲ್ಲಿ ತಿಳಿಸಿದೆ







