ಆತ್ಮಸಾಕ್ಷಿಗೆ ವಿರುದ್ದವಾಗಿ ಕಾರ್ಯ ನಿರ್ವಹಿಸಿಲ್ಲ: ಟಿ.ವೆಂಕಟೇಶ್

ಉಡುಪಿ, ಫೆ.23: ತಾನು ಇದುವರೆವಿಗೆ ಕಾರ್ಯ ನಿರ್ವಹಿಸಿದ ಯಾವುದೇ ಇಲಾಖೆಯಲ್ಲೂ ಆತ್ಮಸಾಕ್ಷಿಗೆ ವಿರುದ್ದವಾಗಿ ಕಾರ್ಯ ನಿರ್ವಹಿಸದೇ, ಕಾನೂನು ಹಾಗೂ ನಿಯಮಗಳ ಪ್ರಕಾರ ಕಾರ್ಯ ನಿರ್ವಹಿಸಿದ್ದೇನೆ ಎಂದು ಉಡುಪಿ ಜಿಲ್ಲೆಯ ನಿರ್ಗಮನ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದ್ದಾರೆ.
ಗುರುವಾರ ಮಣಿಪಾಲದಲ್ಲಿರುವ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡುತಿದ್ದರು.
ಉಡುಪಿ ಜಿಲ್ಲೆಗೆ ವರ್ಗವಾಗಿ ಬಂದದ್ದು ಅನಿರೀಕ್ಷಿತವಾಗಿ. ಈಗ ಜಿಲ್ಲೆಯ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳುವ ಮುನ್ನವೇ ವರ್ಗಾವಣೆಯಾಗಿದೆ. ಸರಕಾರಿ ನೌಕರರಿಗೆ ವರ್ಗಾವಣೆ ಸಾಮಾನ್ಯ.ಆದರೆ ನನ್ನ ಕರ್ತವ್ಯ ನಿರ್ವಹಣೆಯ ಸಮಯದಲ್ಲಿ ಜನ ಸಾಮಾನ್ಯರಿಗೆ ತೊಂದರೆಯಾಗದಂತೆ ಶೀಘ್ರದಲ್ಲಿ ಕಡತಗಳ ವಿಲೇವಾರಿ ಮಾಡಲಾಗಿದೆ. ಅಕ್ರಮ ಮರಳುಗಾರಿಕೆಯನ್ನು ತಡೆಯಲಾಗಿದೆ. ಜಿಲ್ಲೆಗೆ ಹೊರ ಜಿಲ್ಲೆಗಳಿಂದ ಬರುವ ಮರಳಿಗೆ ಯಾವುದೇ ನಿರ್ಂದ ವಿಧಿಸದ ಕಾರಣ ಜಿಲ್ಲೆಯಲ್ಲಿ ಕಟ್ಟಡ ಕಾಮಗಾರಿಗಳಿಗೆ ಮರಳಿನ ಅಭಾವ ಉಂಟಾಗಿಲ್ಲ ಎಂದರು.
ತಾನು ಕಾನೂನಿಗೆ ವಿರುದ್ದವಾಗಿ ಯಾವುದೇ ಕಾರ್ಯ ನಿರ್ವಹಿಸಿಲ್ಲ. ಟೋಲ್ ಸಂಗ್ರಹ ವಿಚಾರದಲ್ಲೂ ಸಹ ಸರಕಾರದ ಸೂಚನೆಯನ್ನು ಪಾಲಿಸುವ ಕೆಲಸ ಮಾತ್ರ ಮಾಡಿದ್ದೇನೆ. ಟೋಲ್ ಸಂಗ್ರಹ ನಿರ್ಧಾರ ತನ್ನದಲ್ಲ ಎಂದು ಟಿ.ವೆಂಕಟೇಶ್ ಸ್ಪಷ್ಟಪಡಿಸಿದರು.
ಜಿಲ್ಲೆಯಲ್ಲಿ ಅಧಿಕಾರಿಗಳ ಕೊರೆತೆಯಿದ್ದರೂ ಸಕಾಲ ಮತ್ತು ಭೂಮಿ ಯೋಜನೆಯಲ್ಲಿ ಇಡೀ ರಾಜ್ಯದಲ್ಲಿ ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ. ಜಿಲ್ಲೆಯ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ನೀಡಿದ ಸಹಕಾರದಿಂದ ಉತ್ತಮವಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗಿದೆ ಎಂದು ವೆಂಕಟೇಶ್ ತಿಳಿಸಿದರು.
ಅಭಿನಂದನಾ ಭಾಷಣದಲ್ಲಿ ಮಾತನಾಡಿದ ನೂತನ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಕಂದಾಯ ವಿಚಾರಗಳ ಅಳವಾದ ಜ್ಞಾನವಿದ್ದ ಜಿಲ್ಲಾಧಿಕಾರಿಗಳು, ಯಾವುದೇ ಒತ್ತಡ, ಉದ್ವೇಗಕ್ಕೆ ಒಳಗಾಗದೇ ಸಮಚಿತ್ತ ದಿಂದ, ಕಾನೂನಿನ ಪ್ರಕಾರವೇ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದ ಮಾದರಿ ತಮಗೆ ಪ್ರೇರಣೆಯಾಗಲಿದೆ ಎಂದರು.
ಅಪರ ಜಿಲ್ಲಾಧಿಕಾರಿ ಜಿ.ಅನುರಾಧ ಮಾತನಾಡಿ, ಇವರ ಆಡಳಿತದ ಅಲ್ಪಾವಧಿಯಲ್ಲಿಯೇ, 152 ಎಕ್ರೆ ಸರಕಾರಿ ಜಮೀನಿನ ಅಕ್ರಮ ತೆರವು, 469 ಭೂಪರಿವರ್ತನೆಯ ಆದೇಶ, ಜಿಲ್ಲಾಧಿಕಾರಿ ಕೋರ್ಟ್‌ನಲ್ಲಿನ ಶೇ.99 ಪ್ರಕರಣಗಳ ವಿಲೇವಾರಿ, ಎಪಿಎಂಸಿ ಚುನಾವಣೆ, ಸಂಸದರ ನಿಧಿಯ ಪಾರದರ್ಶಕ ಬಳಕೆ, ಭೂವ್ಯಾಜ್ಯಗಳ ವಿಲೇವಾರಿ ಮತ್ತಿತರ ಕಂದಾಯ ಇಲಾಖೆ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ, ತ್ವರಿತಗತಿಯಲ್ಲಿ ಇತ್ಯರ್ಥಪಡಿಸಲಾಗಿದೆ ಎಂದು ವಿವರಿಸಿದರು.
ಕುಂದಾಪುರ ಉಪ ವಿಭಾಗಾಧಿಕಾರಿ ಶಿಲ್ಪಾನಾಗ್, ಎಎಸ್ಪಿ ವಿಷ್ಣುವರ್ಧನ್, ಆಹಾರ ಇಲಾಖೆಯ ಉಪನಿರ್ದೇಶಕ ಯೋಗೇಶ್ವರ್, ಪೌರಾಯುಕ್ತ ಮಂಜುನಾಥಯ್ಯ ಮಾತನಾಡಿದರು.
ಉಡುಪಿ ಜಿಪಂ ಉಪಾಧ್ಯಕ್ಷೆ ಶೀಲಾ ಶೆಟ್ಟಿ, ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ, ಉಡುಪಿ ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್ ಉಪಸ್ಥಿತರಿದ್ದರು. ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರೋಶನ್ ಕುಮಾರ್ ಶೆಟ್ಟಿ ನಿರೂಪಿಸಿದರು. ತಹಶೀಲ್ದಾರ್ ಮಹೇಶ್ಚಂದ್ರ ವಂದಿಸಿದರು.







