ಸ್ಟೆಂಟ್‌ಗೆ ಹೆಚ್ಚು ಹಣ ಪಡೆಯುವ ಪ್ರತಿಷ್ಠಿತ ಆಸ್ಪತ್ರೆಗಳ ಮೇಲೆ ಸರಕಾರದ ಕೆಂಗಣ್ಣು

ಹೊಸದಿಲ್ಲಿ, ಫೆ.24: ಸ್ಟೆಂಟ್‌ಗೆ ಹೆಚ್ಚು ಹಣ ಪಡೆಯುವ ಪ್ರತಿಷ್ಠಿತ ಆಸ್ಪತ್ರೆಗಳ ಮೇಲೆ ರಾಷ್ಟ್ರೀಯ ಔಷಧ ಬೆಲೆ ನಿಗದಿ ಪ್ರಾಧಿಕಾರ (ಎನ್‌ಪಿಪಿಎ) ಹದ್ದಿನಕಣ್ಣಿನಿಂದ ನೋಡುತ್ತಿದೆ. ಹೃದಯ ಸ್ಟೆಂಟ್ ಅಳವಡಿಸುವ ವೇಳೆ ರೋಗಿಗಳಿಗೆ ಅಧಿಕ ದರ ವಿಧಿಸಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಹಲವು ಆಸ್ಪತ್ರೆಗಳ ಬಗ್ಗೆ ಈ ನಿಯಂತ್ರಣ ಸಂಸ್ಥೆ ತನಿಖೆಯನ್ನೂ ಆರಂಭಿಸಿದೆ.
ಚಂಡೀಗಢದ ಪಿಜಿಐಎಂಇಆರ್, ಮುಂಬೈನ ಲೀಲಾವತಿ ಆಸ್ಪತ್ರೆ, ದಿಲ್ಲಿಯ ಸಾಕೇತ್‌ನಲ್ಲಿರುವ ಮ್ಯಾಕ್ಸ್ ಆಸ್ಪತ್ರೆ, ಫರೀದಾಬಾದ್‌ನ ಮೆಟ್ರೊ ಆಸ್ಪತ್ರೆ, ಹರ್ಯಾಣದ ಬಲ್ಲಾಬರ್ಗ್ ಮೆಟ್ರೊ ಆಸ್ಪತ್ರೆ ಹಾಗೂ ಉತ್ತರ ಪ್ರದೇಶದ ಬರೇಲಿಯ ರಾಮಮೂರ್ತಿ ಆಸ್ಪತ್ರೆಗಳ ವಿರುದ್ಧ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕೃತ ಮೂಲಗಳು ಹೇಳಿವೆ.
ಗುರುವಾರ ಸಂಜೆ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ ಇದನ್ನು ಎನ್‌ಪಿಪಿಎ ಘೋಷಿಸಿದ್ದು, ಈ ಆಸ್ಪತ್ರೆಗಳ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಆಯಾ ರಾಜ್ಯಗಳ ಔಷಧ ನಿಯಂತ್ರಕರಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ರೋಗಿಗಳು ಸಹಾಯವಾಣಿ ಮೂಲಕ ಆಸ್ಪತ್ರೆಗಳ ಬಗ್ಗೆ ದೂರು ನೀಡುತ್ತಿದ್ದಾರೆ ಎಂದು ಅಧಿಕೃತ ಮೂಲಗಳು ವಿವರಿಸಿವೆ.
ಆದರೆ ಸ್ಟೆಂಟ್‌ಗಳ ಕೊರತೆ ಬಗ್ಗೆ ಯಾವ ದೂರೂ ಬಂದಿಲ್ಲ. ಸ್ಟೆಂಟ್‌ಗಳ ಸರಬರಾಜು ಹಾಗೂ ಲಭ್ಯತೆಯನ್ನು ಖಾತ್ರಿಪಡಿಸಲಾಗಿದೆ ಎಂದು ಎನ್‌ಪಿಪಿಎ ಸ್ಪಷ್ಟಪಡಿಸಿದೆ. ಆಸ್ಪತ್ರೆಗಳ ವಿರುದ್ಧ ಬಂದಿರುವ ದೂರನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ವರ್ಗಾಯಿಸಲಾಗಿದ್ದು, ಈಗಾಗಲೇ ತನಿಖೆ ಆರಂಭಿಸಲಾಗಿದೆ ಎಂದು ಹರ್ಯಾಣ ಔಷಧ ನಿಯಂತ್ರಕರು ಎನ್‌ಪಿಪಿಎಗೆ ತಿಳಿಸಿದ್ದಾಗಿ ಇನ್ನೊಂದು ಟ್ವೀಟ್‌ನಲ್ಲಿ ಎನ್‌ಪಿಪಿಎ ಪ್ರಕಟಿಸಿದೆ.
ಎಷ್ಟರಮಟ್ಟಿಗೆ ನಿಯಮ ಉಲ್ಲಂಘಿಸಲಾಗಿದೆ ಎನ್ನುವುದನ್ನು ಆಧರಿಸಿ, ಕ್ರಮ ಕೈಗೊಳ್ಳಲಾಗುತ್ತದೆ. ಅಗತ್ಯ ವಸ್ತುಗಳ ಕಾಯ್ದೆ ಹಾಗೂ ಡಿಪಿಸಿಓ ಅಡಿಯಲ್ಲಿ ಇಂಥ ಅಕ್ರಮಗಳ ವಿರುದ್ಧ ಕ್ರಮ ಕೈಗೊಳ್ಳಲು ಅವಕಾಶವಿದೆ. ದಂಡ ವಿಧಿಸುವದರಿಂದ ಹಿಡಿದು, ಉತ್ಪಾದನೆ ಅಥವಾ ಆಮದು ಲೈಸನ್ಸ್ ರದ್ದು ಮಾಡಲು, ಕಪ್ಪುಮಟ್ಟಿಗೆ ಸೇರಿಸಲು ಕೂಡಾ ಅವಕಾಶವಿದೆ ಎಂದು ಔಷಧ ಇಲಾಖೆ ಕಾರ್ಯದರ್ಶಿ ಜೆ.ಪಿ.ಪ್ರಕಾಶ್ ಹೇಳಿದ್ದಾರೆ.