ಬಂದ್ ಕರೆ ಸುಪ್ರೀಂ ಕೋರ್ಟ್ ತೀರ್ಪಿಗೆ ಅವಮಾನ: ಜನಾರ್ದನ ಪೂಜಾರಿ

ಮಂಗಳೂರು, ಫೆ.24: ಹಿಂದೂಪರ ಸಂಘಟನೆಗಳು ಫೆ.25ರಂದು ದಕ್ಷಿಣ ಕನ್ನಡ ಜಿಲ್ಲಾ ಬಂದ್‌ಗೆ ಕರೆ ನೀಡುವ ಮೂಲಕ ಬಂದ್ ಕುರಿತಾದ ಸುಪ್ರೀಂ ಕೋರ್ಟ್ ತೀರ್ಪಿಗೆ ಅವಮಾನ ಮಾಡಿವೆ ಎಂದು ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಹೇಳಿದ್ದಾರೆ.
ಪತ್ರಿಕಾ ಭವನದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಮತ್ತು ಅದರ ಸಹ ಸಂಘಟನೆಗಳು ಸುಪ್ರೀಂ ಕೋರ್ಟ್‌ಗೆ ಒಡ್ಡಿರುವ ಸವಾಲನ್ನು ಸ್ವೀಕರಿಸಿ ಸ್ಪಷ್ಟವಾದ ತೀರ್ಪು ನೀಡಬೇಕಾದ ಸಮಯ ಎದುರಾಗಿದೆ ಎಂದರು. ಸುಪ್ರೀಂ ಕೋರ್ಟ್ ತೀರ್ಪಿಗೆ ಅವಮಾನ ದೇಶಕ್ಕೆ ಮಾಡಿರುವ ಅವಮಾನ. ಬಿಜೆಪಿ ಇದಕ್ಕೆ ಉತ್ತರ ನೀಡಬೇಕು ಎಂದು ಅವರು ಹೇಳಿದರು.
ಎತ್ತಿನಹೊಳೆ ನಿಲ್ಲಿಸಿದ್ದಿದ್ದರೆ ಉಪವಾಸ ಸತ್ಯಾಗ್ರಹ!
ಎತ್ತಿನಹೊಳೆ ಹಣ ದೋಚಲು ಮಾಡಿರುವ ಯೋಜನೆ ಮಾತ್ರವಲ್ಲದೆ, ಉತ್ತರ ಕರ್ನಾಟಕದ ಮಹಾದಾಯಿ ಯೋಜನೆಯಂತೆ ಕರಾವಳಿಯನ್ನು ಬರಗಾಲ ಮಾಡಲು ಈ ಯೋಜನೆಯ ಮೂಲಕ ಸಂಚು ನಡೆದಿದೆ ಎಂದು ಜನಾರ್ದನ ಪೂಜಾರಿ ಆರೋಪಿಸಿದರು. ರಾಜ್ಯ ಸರಕಾರ ಹಾಗೂ ಕೇಂದ್ರದ ಪರಿಸರ ಇಲಾಖೆ ಮಧ್ಯ ಪ್ರವೇಶಿಸಿ ತಕ್ಷಣ ಯೋಜನೆಯನ್ನು ನಿಲ್ಲಿಸದಿದ್ದರೆ ಕುದ್ರೋಳಿ ದೇವಸ್ಥಾನದಲ್ಲಿ ತಾನು ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ಹೇಳಿದ ಪೂಜಾರಿ, ದಿನಾಂಕವನ್ನು ಮುಂದೆ ತಿಳಿಸುವುದಾಗಿ ಪ್ರತಿಕ್ರಿಯಿಸಿದರು.







