ಸಮಾಜದ ದಾರಿ ತಪ್ಪಿಸುವ ಕೇರಳದ ನೇತಾರನ ಭಾಷಣ ದ.ಕ ಜಿಲ್ಲೆಗೆ ಬೇಕಿಲ್ಲ: ರವೀಶ್ ತಂತ್ರಿ

ಮಂಗಳೂರು, ಫೆ.24: ಸಿಪಿಎಂ ವಿರುದ್ಧವಾಗಿ ಯಾರೇ ಮಾತನಾಡಿದರೂ ಅವರನ್ನು ಕಗ್ಗೊಲೆ ಮಾಡಿ ಹಣೆಪಟ್ಟಿಯನ್ನು ಅಂಟಿಸಿಕೊಂಡಿರುವ ಪಿಣರಾಯಿ ವಿಜಯನ್ ಕೋಮು ಸೌಹಾರ್ದ ರ‍್ಯಾಲಿಯಲ್ಲಿ ಮಾಡುವ ಭಾಷಣವು ಮಂಗಳೂರಿನ ಜನತೆಗೆ ಅಗತ್ಯವಿಲ್ಲ ಎಂದು ಬಿಜೆಪಿಯ ಕೇರಳ ರಾಜ್ಯ ಸಮಿತಿಯ ಸದಸ್ಯ ಕುಂಟಾರು ರವೀಶ್ ತಂತ್ರಿ ಹೇಳಿದರು.
ನಗರದದಲ್ಲಿ ಸೌಹಾರ್ದ ರ‍್ಯಾಲಿಗೆ ಆಗಮಿಸುತ್ತಿರುವ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿರುದ್ಧ ಸಂಘ ಪರಿವಾರ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಸಮಾಜದ ದಾರಿ ತಪ್ಪಿಸುವ ಕೇರಳದ ನೇತಾರನು ಆಡುವ ಮಾತುಗಳು ದ.ಕ. ಜಿಲ್ಲೆಗೆ ಬೇಕಿಲ್ಲ. ಈ ಸೌಹಾರ್ದ ರ್ಯಾಲಿಗೆ ಆಗಮಿಸುವ ಪಿಣರಾಯಿರನ್ನು ತಡೆದು ತೀರುವ ಸಂಕಲ್ಪ ಮಾಡಲಿದ್ದೇವೆ. ಅಕ್ರಮ ರಾಜಕೀಯದ ವಿರುದ್ಧ ಹರತಾಳವನ್ನು ಮಾಡಲಾಗುವುದು ಎಂದರು.
ವಿಎಚ್‌ಪಿ ಪ್ರಾಂತ ಕಾರ್ಯಾಧ್ಯಕ್ಷ ಎಂ.ಬಿ. ಪುರಾಣಿಕ್ ಮಾತನಾಡಿ, ಪಿಣರಾಯಿ ವಿಜಯನ್ ಅವರ ಮೇಲೆ ಯಾವುದೇ ವೈಯಕ್ತಿಕ ವಿರೋಧವಿಲ್ಲ. ಆದರೆ ಅವರ ಹಿಂದೂ ವಿರೋಧಿ ನೀತಿಗೆ ತಮ್ಮ ವಿರೋಧವಿದೆ. ಸೌಹಾರ್ದ ರ್ಯಾಲಿ ಮೂಲಕ ಶಾಂತಿಯನ್ನು ಕದಡಲು ಪ್ರಯತ್ನಿಸಲಾಗುತ್ತಿದೆ ಎಂದು ತಿಳಿಸಿದರು.
ಫೆ.25ರಂದು ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗಿನ ಹರತಾಳದಲ್ಲಿ ಸ್ವಯಂ ಪ್ರೇರಿತರಾಗಿ ಭಾಗವಹಿಸಬೇಕೆಂದು ಜನರಿಗೆ ಮನವಿ ಮಾಡಿದರು.
ವೇದಿಕೆಯಲ್ಲಿ ಕೇರಳ ರಾಜ್ಯ ಬಿಜೆಪಿಯ ಸುರೇಂದ್ರನ್, ಬಿಜೆಪಿಯ ಜಿಲ್ಲಾಧ್ಯಕ್ಷ ಸಂಜೀವ್ ಮಟಂದೂರು, ಬಜರಂಗದಳದ ಪ್ರಾಂತ ಸಂಚಾಲಕ ಶರಣ್ ಪಂಪ್‌ವೆಲ್, ಬಜರಂಗದಳದ ಜಿಲ್ಲಾ ಸಂಚಾಲಕ ಭುಜಂಗ ಕುಲಾಲ್, ವಿಎಚ್‌ಪಿ ಜಿಲ್ಲಾಧ್ಯಕ್ಷ ಜಗದೀಶ್ ಶೇಣವ, ಎಬಿವಿಪಿಯ ಸುಜೀತ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭ ಸಂಸದರಾದ ಶೋಭಾ ಕರಂದ್ಲಾಜೆ, ನಳಿನ್‌ಕುಮಾರ್ ಕಟೀಲ್, ಪ್ರಭಾಕರ್ ಬಂಗೇರಾ, ಮೀನಾಕ್ಷಿ ಶಾಂತಗೋಡು, ಕೋಟ ಶ್ರೀನಿವಾಸ ಪೂಜಾರಿ, ಉಪಮೇಯರ್ ಸುಮಿತ್ರಾ ಕರಿಯ ಮತ್ತಿತರರಿದ್ದರು.







