ಕ್ಯಾಂಪಸ್ಸುಗಳಲ್ಲಿ ಎಬಿವಿಪಿ ಕಾರ್ಯಕರ್ತರೇ ದೇಶವಿರೋಧಿ ಘೋಷಣೆಗಳನ್ನು ಕೂಗಿ ನಂತರ ಹಿಂಸೆಗಿಳಿಯುತ್ತಾರೆ: ಎಎಪಿ ಆರೋಪ

ಹೊಸದಿಲ್ಲಿ, ಫೆ.24: ಎಬಿವಿಪಿ ಕಾರ್ಯಕರ್ತರೇ ಶಿಕ್ಷಣ ಸಂಸ್ಥೆಗಳ ಕ್ಯಾಂಪಸ್ಸುಗಳಲ್ಲಿ ಭಾರತ ವಿರೋಧಿ ಘೋಷಣೆಗಳನ್ನು ಕೂಗಿ ಗಲಭೆ ಸೃಷ್ಟಿಸುವ ಯತ್ನ ಮಾಡುತ್ತಿದ್ದಾರೆಂದು ಎಎಪಿ ಆರೋಪಿಸಿದೆ. ದಿಲ್ಲಿಯ ರಾಮ್ಜಾಸ್ ಕಾಲೇಜಿನಲ್ಲಿ ಆರೆಸ್ಸೆಸ್ ಬೆಂಬಲಿತ ಎಬಿವಿಪಿಯ ಸದಸ್ಯರನ್ನೊಳಗೊಂಡ ಘರ್ಷಣೆ ನಡೆದ ಹಿನ್ನೆಲೆಯಲ್ಲಿ ಎಎಪಿಯಿಂದ ಈ ಹೇಳಿಕೆ ಬಂದಿದೆ.
ದಿಲ್ಲಿ ಪೊಲೀಸರು ಹಾಗೂ ಕೇಂದ್ರ ಸರಕಾರ ಮಾತ್ರ ತಪ್ಪು ಮಾಡಿದ ಎಬಿವಿಪಿ ಕಾರ್ಯಕರ್ತರ ರಕ್ಷಣೆಗೆ ನಿಂತಿದೆಯೆಂದೂ ಎಎಪಿ ಹೇಳಿದೆ.
ಜೆಎನ್‌ಯು ವಿದ್ಯಾರ್ಥಿಗಳಾದ ಉಮರ್ ಖಾಲಿದ್ ಮತ್ತು ಶೆಹ್ಲಾ ರಶೀದ್ ಅವರಿಗೆ ರಾಮ್ಜಾಸ್ ಕಾಲೇಜಿನಲ್ಲಿ ವಿಚಾರ ಸಂಕಿರಣವೊಂದಕ್ಕೆ ಆಹ್ವಾನ ನೀಡಿರುವ ವಿರುದ್ಧ ಮಂಗಳವಾರ ನಡೆದ ಹಿಂಸೆಗೆ ಪ್ರತಿಕ್ರಿಯಿಸಿದ ಎಎಪಿ ನಾಯಕ ಕುಮಾರ್ ವಿಶ್ವಾಸ್ ಇದು ಉತ್ತರ ಪ್ರದೇಶ ಚುನಾವಣೆಯಲ್ಲಿ ಸೋಲುವ ಭಯ ಹೊಂದಿರುವ ಬಿಜೆಪಿಯಿಂದ ಗಮನವನ್ನು ಬೇರೆಡೆಗೆ ಸೆಳೆಯುವ ತಂತ್ರ ಎಂದು ಹೇಳಿದರು.
''ದಿಲ್ಲಿ ಪೊಲೀಸರು ಕೇಂದ್ರದ ಅಧೀನದಲ್ಲಿ ಬರುತ್ತಾರಾದರೂ ಕಳೆದ ವರ್ಷ ಕಾಶ್ಮೀರದಲ್ಲಿ ಪಿಡಿಪಿ ಜತೆ ಸರಕಾರ ರಚಿಸುವ ಹುಮ್ಮಸ್ಸಿನಲ್ಲಿದ್ದ ಬಿಜೆಪಿ ಜೆಎನ್‌ಯುವಿನಲ್ಲಿ ದೇಶ ವಿರೋಧಿ ಘೋಷಣೆಗಳನ್ನು ಕೂಗಿದವರ ವಿರುದ್ಧ ಕ್ರಮ ಕೈಗೊಂಡಿರಲಿಲ್ಲ,'' ಎಂದು ಅವರು ಆರೋಪಿಸಿದರಲ್ಲದೆ ಅವರ ಜನ (ಎಬಿವಿಪಿ) ಕೆಲ ಕ್ಯಾಂಪಸ್ಸುಗಳಿಗೆ ಹೋಗಿ ದೇಶ ವಿರೋಧಿ ಘೋಷಣೆಗಳನ್ನು ಕೂಗಿ ನಂತರ ತಾವಾಗಿಯೇ ಗಲಭೆ ಸೃಷ್ಟಿಸುತ್ತಾರೆ,'' ಎಂದು ಹೇಳಿದರು.