ಸಿನೆಮಾವನ್ನು ಭೂಗತ ಜಗತ್ತು ನಿಯಂತ್ರಿಸಲು ಬಿಡುವುದಿಲ್ಲ: ಪಿಣರಾಯಿ ವಿಜಯನ್

ಕಣ್ಣೂರ್,ಫೆ. 24: ಮಲೆಯಾಳಂ ಸಿನೆಮಾರಂಗವನ್ನು ಭೂಗತಲೋಕದ ನಿಯಂತ್ರಣಕ್ಕೊಳಗಾಗಲು ಬಿಡುವುದಿಲ್ಲ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಭೂಗತ ಜಗತ್ತಿಗೆ ಸಂಬಂಧಿಸಿದ ಯಾರಾದರೂ ಮಲೆಯಾಳಂ ಸಿನೆಮಾ ರಂಗವನ್ನು ನಾಶಮಾಡಲು ಪ್ರಯತ್ನಿಸಿದರೆ ಸಿನೆಮಾ ಜಗತ್ತಿನ ಜೊತೆ ಸರಕಾರ ಇರುತ್ತದೆ ಎಂದು ಅವರು ಕಣ್ಣೂರಿನಲ್ಲಿ ತಿಳಿಸಿದರು.
ಹಲವು ಕೇಸುಗಳಲ್ಲಿ ಆರೋಪಿಗಳು ಯಾರೆಂದು ಪತ್ತೆಹಚ್ಚುವ ಮೊದಲೇ ಹಲವರು ಕಾಲ್ಪನಿಕ ಆರೋಪಿಗಳನ್ನು ಸೃಷ್ಟಿಸಲು ಪ್ರಯತ್ನಿಸುತ್ತಾರೆ. ಪೊಲೀಸರು ಇಂತಹ ಕಾಲ್ಪನಿಕ ಆರೋಪಿಗಳ ಬೆನ್ನು ಬೀಳುವುದಿಲ್ಲ ಎಂದು ಮುಖ್ಯಮಂತ್ರಿ ಹೇಳಿದರು.
ಕೊಚ್ಚಿಯಲ್ಲಿ ನಡೆದ ಘಟನೆಯನ್ನುಮುಂದಿಟ್ಟು ಯಾವ ಸಂಬಂಧವೂ ಇಲ್ಲದವರ ವಿರುದ್ಧ ವ್ಯಾಪಕ ಪ್ರಚಾರ ನಡೆಯುತ್ತಿದೆ. ಇದು ಸರಿಯಲ್ಲ. ನೈಜ ಆರೋಪಿಗಳನ್ನು ಕಂಡು ಹುಡುಕಲು ಪ್ರಯತ್ನಿಸಬೇಕಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.
ಕೊಚ್ಚಿಯಲ್ಲಿ ನಟಿಯನ್ನು ಆಕ್ರಮಿಸಿದ ಆರೋಪದಲ್ಲಿ ಬಂಧಿಸಲಾದ ವ್ಯಕ್ತಿಗಳ ಸಾಕ್ಷ್ಯಗಳ ಆಧಾರದಲ್ಲಿ ಕ್ರಮ ಮುಂದುವರಿಯಲಿದೆ ಎಂದು ಅವರು ಭರವಸೆ ನೀಡಿದರು.





