ನಿರ್ಮಲ ಮನಸ್ಸಿನಿಂದ ಅನಾರೋಗ್ಯ ದೂರ: ಡಾ. ಬಿ.ಎಂ.ಹೆಗ್ಡೆ
'ಆಹಾರ ಮಂಥನ' ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟನೆ

ಉದ್ಯಾವರ, ಫೆ.24: ನಾವು ಯಾವ ಆಹಾರ ತಿನ್ನಬೇಕೆಂಬುದು ಮುಖ್ಯ ಅಲ್ಲ. ನಮ್ಮನ್ನು ಯಾವ ಆಹಾರ ತಿನ್ನುತ್ತದೆ ಎಂಬ ಕುರಿತು ಅರಿವು ಬೆಳೆಸಿ ಕೊಳ್ಳಬೇಕು. ನಾವು ದೈಹಿಕ ಆರೋಗ್ಯಕ್ಕಿಂತ ಮಾನಸಿಕ ಆರೋಗ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು. ಋಣಾತ್ಮಕ ಚಿಂತನೆಯೇ ಅನಾರೋಗ್ಯಕ್ಕೆ ಕಾರಣ. ನಿರ್ಮಲ ಮನಸ್ಸಿನಿಂದ ಆರೋಗ್ಯಕರವಾಗಿರಲು ಸಾಧ್ಯ ಎಂದು ಮಣಿಪಾಲ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಬಿ.ಎಂ.ಹೆಗ್ಡೆ ಹೇಳಿದ್ದಾರೆ.
ಉದ್ಯಾವರ ಕುತ್ಪಾಡಿ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜಿನ ಸ್ವಸ್ಥವೃತ್ತ ಸ್ನಾತಕೋತ್ತರ ವಿಭಾಗದ ವತಿಯಿಂದ ದಿ.ಮಾತೃಶ್ರೀ ರತ್ನಮ್ಮ ಹೆಗ್ಗಡೆ ಜನ್ಮದಿನದ ಸಂಸ್ಮರಣಾರ್ಥವಾಗಿ ಕಾಲೇಜಿನ ಭಾವಪ್ರಕಾಶ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಲಾದ 'ಆಹಾರ ಮಂಥನ' ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ದಿಕ್ಸೂಚಿ ಭಾಷಣ ಮಾಡಿದರು.
ಇತರರು ಮಾಡಿರುವ ಸಂಶೋಧನೆಯನ್ನು ಅನುಸರಿಸುವುದು ಹಾಗೂ ಮರು ಸಂಶೋಧನೆ ಮಾಡುವುದಕ್ಕಿಂತ ನಾವೇ ಹೊಸ ಹೊಸ ಸಂಶೋಧನೆಯತ್ತ ಹೆಚ್ಚಿನ ಆಸಕ್ತಿ ತೋರಬೇಕು. ಇದರಿಂದ ನಮ್ಮ ಜ್ಞಾನ ಕೂಡ ವೃದ್ದಿಸುತ್ತದೆ. ಅಲೋಪತಿ, ಹೋಮಿಯೋಪತಿಗಿಂತ ವೈದ್ಯರಲ್ಲಿ ಸಿಂಪಥಿ ಮುಖ್ಯ ಎಂದು ಅವರು ತಿಳಿಸಿದರು.
ಮಾನಸಿಕ ಕಾಯಿಲೆಗಳಿಗೆ ಔಷಧಿಗಿಂತ ಮನಸ್ಸನ್ನು ಹಿತಗೊಳಿಸುವ ವಾತಾವರಣ ಬೇಕು. ಸಂಗೀತ ಕೇಳುವುದರಿಂದಲೂ ಮನಸ್ಸನ್ನು ಖುಷಿ ಪಡಿಸ ಬಹುದು. ಇದು ಕೂಡ ಮಾನಸಿಕ ಕಾಯಿಲೆಗೆ ಔಷಧಿಯಾಗಿದೆ ಎಂದ ಅವರು, ಮನುಷ್ಯನ ದೇಹದಲ್ಲಿ ಶೇ.90ರಷ್ಟು ಕೊಲೆಸ್ಟ್ರಾಲ್ ತಾನಾಗಿಯೇ ಉತ್ಪತ್ತಿಯಾಗುತ್ತದೆ. ನಮ್ಮ ದೇಹವು ಪ್ರಾಕೃತಿಕವಾಗಿ ತನಗೆ ಬೇಡದ ವಸ್ತು ಗಳನ್ನು ಎಂದಿಗೂ ಉತ್ಪಾದಿಸುವುದಿಲ್ಲ. ಆದುದರಿಂದ ಕೊಲೆಸ್ಟ್ರಾಲ್ ಹೆಸರಿ ನಲ್ಲಿ ಉತ್ತಮ ಆಹಾರವನ್ನು ದೂರ ಮಾಡುವುದರಲ್ಲಿ ಅರ್ಥವಿಲ್ಲ ಎಂದು ಅವರು ಹೇಳಿದರು.
ಇಂದು ಮನುಷ್ಯನ ದೇಹವು ಅಪಾಯಕಾರಿಯತ್ತ ಸಾಗುತ್ತಿದೆ. ನಮ್ಮಲ್ಲಿನ ಸ್ವಾರ್ಥದಿಂದ ಸಂತೋಷ ಕಡಿಮೆಯಾಗಿ ನಾನಾ ಕಾಯಿಲೆಯನ್ನು ಆಹ್ವಾನಿ ಸುತ್ತಿದ್ದೇವೆ. ಆದುದರಿಂದ ನಮ್ಮಲ್ಲಿರುವ ನಾನು ನಾನು ಎಂಬ ಅಹಂ ಬಿಡ ಬೇಕು ಎಂದ ಡಾ.ಬಿ.ಎಂ.ಹೆಗ್ಡೆ, ಅಮೆರಿಕಾ ವೈದ್ಯಕೀಯದಲ್ಲಿ ಆಯುರ್ವೇದ ಸೇರಿಸುವ ಕೆಲಸ ನಡೆಯುತ್ತಿದ್ದು, ಅದಕ್ಕಿಂತ ಮೊದಲು ಆ ಕೆಲಸ ಭಾರತ ದಲ್ಲಿ ನಡೆಯಬೇಕಾಗಿದೆ. ಆ ಕುರಿತು ಕೇಂದ್ರ ಸರಕಾರ ಚಿಂತನೆ ಮಾಡು ತ್ತಿದೆ ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ.ಶ್ರೀಕಾಂತ್ ಯು. ಅಧ್ಯಕ್ಷತೆ ವಹಿಸಿದ್ದರು. ಸಂಘಟನಾ ಕಾರ್ಯದರ್ಶಿ ಡಾ.ಬಿ.ಆರ್.ದೊಡ್ಡಮನಿ ಸ್ವಾಗತಿಸಿದರು. ಸ್ವಸ್ಥವೃತ್ತ ಸ್ನಾತಕೋತ್ತರ ವಿಭಾಗದ ಅಸೋಸಿಯೇಟ್ ಪ್ರೊ.ಡಾ.ವಿಜಯ ಬಿ. ನೆಗಲೂರು ವಂದಿಸಿದರು. ಡಾ.ರವೀಂದ್ರ ಅಂಗಡಿ ಹಾಗೂ ಡಾ.ಅಮಲಾ ಕಾರ್ಯಕ್ರಮ ನಿರೂಪಿಸಿದರು.







