'ಅಮರಾವತಿ' ಮರು ಬಿಡುಗಡೆಗೆ ನಿರ್ಧಾರ: ಗಿರಿರಾಜ್

ಉಡುಪಿ, ಫೆ.24: ಉಡುಪಿಯ ವಾಟ್ಸಪ್ ಓದುಗರ ಬಳಗದ ವತಿ ಯಿಂದ ಪೌರ ಕಾರ್ಮಿಕರ ಜೀವನ ಕಥೆಯುಳ್ಳ ಬಿ.ಎಂ.ಗಿರಿರಾಜ್ ನಿರ್ದೇಶನದ 'ಅಮರಾವತಿ; ಕನ್ನಡ ಚಲನಚಿತ್ರ ಪ್ರದರ್ಶನವು ಉಡುಪಿಯ ಡಯಾನಾ ಥಿಯೇಟರಿನಲ್ಲಿ ಗುರುವಾರ ನಡೆಯಿತು.
ಚಿತ್ರ ವೀಕ್ಷಣೆಯ ಬಳಿಕ ನಡೆದ ಸಂವಾದದಲ್ಲಿ ಮಾತನಾಡಿದ ನಿರ್ದೇಶಕ ಬಿ.ಎಂ.ಗಿರಿರಾಜ್, ಫೆ.10ರಂದು ರಾಜ್ಯದ 35 ಚಿತ್ರಮಂದಿರಗಳಲ್ಲಿ ಸಿನೆಮಾ ಬಿಡುಗಡೆ ಮಾಡಲಾಗಿತ್ತು. ಆದರೆ ಈ ಸಿನೆಮಾ ನೋಡಿರುವವರ ಸಂಖ್ಯೆ ಕೆಲವೇ. ನೋಡಿದವರೆಲ್ಲ ಪ್ರಶಂಸೆಯ ಮಾತುಗಳನ್ನಾಡಿದ್ದಾರೆ. ಆದುದರಿಂದ ಈ ಸಿನೆಮಾವನ್ನು ಮರು ಬಿಡುಗಡೆಗೆ ನಿರ್ಮಾಪಕರು ನಿರ್ಧರಿಸಿದ್ದಾರೆ ಎಂದು ತಿಳಿಸಿದರು.
ಪೌರಕಾರ್ಮಿಕರ ಕಷ್ಟ, ಬೇಡಿಕೆಗಳನ್ನು ಅರಿತು ಈ ಸಿನೆಮಾ ಮಾಡಲಾಗಿದೆ. ಇದರಲ್ಲಿ ಯಾವುದೇ ಹಣ ಮಾಡುವ ಉದ್ದೇಶವಿಲ್ಲ. ಈ ಸಿನೆಮಾದ ಮೂಲಕ ಪೌರ ಕಾರ್ಮಿಕರ ಕುರಿತ ಸಾರ್ವಜನಿಕರ ಮನೋಭಾವ ಬದಲಾಯಿಸುವ ಪ್ರಯತ್ನ ಮಾಡುತ್ತಿದ್ದೇನೆ ಎಂದು ಅವರು ಹೇಳಿದರು.
2013ರಲ್ಲಿ ಜಟ್ಟ, 2015ರಲ್ಲಿ ಮೈತ್ರಿ ಸಿನೆಮಾ ಮಾಡಿದ್ದೆ. ಈ ಎರಡೂ ಸಿನೆಮಕ್ಕೂ ರಾಜ್ಯ ಪ್ರಶಸ್ತಿ ಲಭಿಸಿದೆ. ಈ ಸಿನೆಮಾವನ್ನು ಕೂಡ ವಿವಿಧ ಪ್ರಶಸ್ತಿ ಗಳಿಗೆ ಕಳುಹಿಸಿಕೊಡಲಾಗುವುದು. ಮಾರ್ಚ್ ಕೊನೆಯಲ್ಲಿ ಹೊಸ ಸಿನೆಮಾ 'ತುಂಡು ಹೈಕಳ ಸಹವಾಸ' ಸಿನೆಮಾ ಬಿಡುಗಡೆಯಾಗಲಿದೆ ಎಂದು ಅವರು ತಿಳಿಸಿದರು.
ಚಿತ್ರ ವೀಕ್ಷಿಸಿದ ಉಡುಪಿಯ ಪೌರಕಾರ್ಮಿಕರೊಬ್ಬರು ತಮ್ಮ ಅನಿಸಿಕೆ ವ್ಯಕ್ತಪಡಿಸಿ, ಈ ಸಿನೆಮಾದಲ್ಲಿ ಬರುವ ಎಲ್ಲವೂ ನೈಜ ಸಂಗತಿಯಾಗಿದೆ. ನಮ್ಮದು ಕೂಡ ಅದೇ ಗತಿ. ಕಳೆದ 25ವರ್ಷಗಳಿಂದ ಪೌರ ಕಾರ್ಮಿಕರಾಗಿ ದುಡಿಯುತ್ತಿ ರುವ ನಮಗೆ ಸಿಗೋದು ಕೇವಲ ಆರು ಸಾವಿರ ರೂ. ಸಂಬಳ. ಎಲ್ಲವೂ ಕಾಗದದಲ್ಲಿ ಇದೆ. ಯಾವುದು ಅನುಷ್ಠಾನಕ್ಕೆ ಬರುವುದಿಲ್ಲ ಎಂದರು.
ಈ ಸಂದರ್ಭದಲ್ಲಿ ಈ ಚಿತ್ರದ ನಿರ್ಮಾಪಕ ಮಾಧವ ರೆಡ್ಡಿ, ನಟರಾದ ಸಂತೋಷ್ ಕರ್ಕಿ, ನಟರಾದ ಹೇಮಂತ್ ಸುಶೀಲ್, ಪರಮೇಶ್ವರ್, ವಾಟ್ಸಪ್ ಓದುಗರು ಬಳಗದ ಮಂಜುನಾಥ್ ಕಾಮತ್ ಮೊದಲಾದವರು ಉಪಸ್ಥಿತರಿದ್ದರು.







