ಬಂಟ್ವಾಳ: ಅಕ್ರಮ ಮರಳು ಅಡ್ಡೆಗೆ ದಾಳಿ; 6 ಲಕ್ಷ ರೂ. ಮೌಲ್ಯದ ಯಾಂತ್ರೀಕೃತ ದೋಣಿ ವಶ

ಬಂಟ್ವಾಳ, ಫೆ. 24: ಪೊಳಲಿ ಸಮೀಪದ ಅಡ್ಡೂರು ಫಲ್ಗುಣಿ ಹೊಳೆಯಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಮರಳು ಅಡ್ಡೆಗೆ ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಇಲಾಖೆ ಭೂವಿಜ್ಞಾನಿ ಗಿರೀಶ್ ಮೋಹನ್ ನೇತೃತ್ವದ ತಂಡವು ದಾಳಿ ನಡೆಸಿ 6 ಲಕ್ಷ ರೂ. ಮೌಲ್ಯದ ಎರಡು ಯಾಂತ್ರಿಕ ದೋಣಿ ಸಹಿತ ಹಲವು ರೀತಿಯ ಯಂತ್ರೋಪಕರಣ ವಶಪಡಿಸಿಕೊಂಡ ಘಟನೆ ಗುರುವಾರ ನಡೆದಿದೆ.
ಸ್ಥಳೀಯರ ದೂರಿನ ಹಿನ್ನೆಲೆಯಲ್ಲಿ ಗುರುವಾರ ಬೆಳಗ್ಗೆಯಿಂದ ಸಂಜೆವರೆಗೆ ದಾಳಿ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ನದಿಯ ಏಳೆಂಟು ಕಿ.ಮೀ. ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಅಕ್ರಮ ಮರಳು ಅಡ್ಡೆ ಪತ್ತೆ ಹಚ್ಚಿದ್ದಾರೆ.
ಈ ಸಂದರ್ಭದಲ್ಲಿ ಮರಳು ದಂಧೆಯಲ್ಲಿ ತೊಡಗಿದ್ದವರು ಪರಾರಿಯಾಗಿದ್ದಾರೆ. ಸುಮಾರು 50 ಸಾವಿರ ರೂ. ಮೌಲ್ಯದ ಅಕ್ರಮ ಮರಳು ದಾಸ್ತಾನು ಪತ್ತೆಯಾಗಿದ್ದು, 1.20 ಲಕ್ಷ ರೂ. ಮೌಲ್ಯದ ಯಂತ್ರೋಪಕರಣ, ಮೂರು ಗ್ಯಾಸ್ ಸಿಲಿಂಡರ್ ವಶಪಡಿಸಿಕೊಳ್ಳಲಾಗಿದೆ.
ಮರಳು ಮಾಫಿಯಾ ಭೀತಿ:
ಫೆ. 20ರಂದು ರಾತ್ರಿ ತಾಲೂಕಿನ ಮಾರಿಪಳ್ಳ ಸಮೀಪದ ಸುಜೀರು ಮಸೀದಿ ಬಳಿ ನೇತ್ರಾವತಿ ನದಿಯಿಂದ ಮೇಲೆತ್ತಿ ಅಕ್ರಮವಾಗಿ ದಾಸ್ತಾನು ಮಾಡಿ ಅಲ್ಲಿಂದ ಸಾಗಾಟಕ್ಕೆ ಸಿದ್ಧವಾಗಿದ್ದ ಎರಡು ಕಂಟೈನರ್ ಲಾರಿಯಲ್ಲಿದ್ದ ಮರಳನ್ನು ವಶಪಡಿಸಿಕೊಳ್ಳಲಾಗಿದೆ.
ಲಾರಿಯ ಮೇಲ್ಭಾಗದಲ್ಲಿ ಭತ್ತದ ಹುಟ್ಟು ಇಟ್ಟು ಅಡಿಭಾಗದಲ್ಲಿ ಮರಳು ಇಡಲಾಗಿತ್ತು. ಎರಡೂ ಲಾರಿಯಲ್ಲಿ 60 ಸಾವಿರ ರೂ. ಮೌಲ್ಯದ ಮರಳು ಪತ್ತೆಯಾಗಿದೆ.
ದಾಳಿಯ ಸಂದರ್ಭದಲ್ಲಿ ವಿಜ್ಞಾನಿ ಗಿರೀಶ್ ಮೋಹನ್‌ರನ್ನು ಸುತ್ತುವರಿದ ಅಪರಿಚಿತ ವ್ಯಕ್ತಿಗಳು ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆಗೆ ಯತ್ನಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಜೀವಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿರುವುದಾಗಿ ತಿಳಿಸಿದ್ದಾರೆ.
ಮರಳು ದಂಧೆಕೋರರಿಗೆ ರಾಜಕೀಯ ಬೆಂಬಲ ಇದೆ ಎನ್ನಲಾಗಿದ್ದು, ಇದರಿಂದಾಗಿ ಅಲ್ಲಿನ ಆರೋಪಿಗಳನ್ನು ಬಂಧಿಸಲು ಪೊಲೀಸರಿಗೆ ಸಾಧ್ಯವಾಗಿಲ್ಲ ಎಂಬ ಆರೋಪವೂ ಕೇಳಿ ಬಂದಿದೆ. ಈಗಾಗಲೇ ಮರಳು ತುಂಬಿದ ಎರಡು ಬೃಹತ್ ಗಾತ್ರದ ಲಾರಿಗಳನ್ನು ವಶಪಡಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.







