ಸಿನೆಮಾ ನಟಿ ಮೇಲೆ ಲೈಂಗಿಕ ಹಲ್ಲೆ ಪ್ರಕರಣ : ಆರೋಪಿಯ ಮೊಬೈಲ್ ಫೋನ್‌ನ ಹುಡುಕಾಟದಲ್ಲಿ ಪೊಲೀಸರು

ಎರ್ಣಾಕುಳಂ, ಫೆ.24: ಮಲಯಾಳಂ ಸಿನೆಮಾ ನಟಿಯನ್ನು ಅಪಹರಿಸಿ ಲೈಂಗಿಕ ಹಲ್ಲೆ ನಡೆಸಿದ ಆರೋಪದಡಿ ಬಂಧನದಲ್ಲಿರುವ ಸುನಿಲ್ ಕುಮಾರ್ ಸುರೇಂದ್ರನ್ ಅಲಿಯಾಸ್ ‘ಪಲ್ಸರ್ ಸುನಿ’ಗೆ ಸೇರಿದ ಮೊಬೈಲ್ ಫೋನ್ ಪತ್ತೆ ಕಾರ್ಯ ಈಗ ಪೊಲೀಸರಿಗೆ ಸವಾಲಾಗಿ ಪರಿಣಮಿಸಿದೆ. ನಟಿಯ ಮೇಲೆ ಲೈಂಗಿಕ ಹಲ್ಲೆ ನಡೆಸಿದ ದೃಶ್ಯಗಳನ್ನು ಮೊಬೈಲ್‌ನಲ್ಲಿ ಚಿತ್ರಿಸಿಕೊಂಡಿದ್ದ ಆರೋಪಿ, ಬಳಿಕ ಇದನ್ನು ಬಳಸಿ ಬ್ಲಾಕ್‌ಮೇಲ್ ಮಾಡುವ ಸಂಚು ಹೂಡಿದ್ದ ಎನ್ನಲಾಗಿದೆ.
ಈ ಮೊಬೈಲನ್ನು ಮೋರಿಯೊಂದಕ್ಕೆ ಎಸೆದಿರುವುದಾಗಿ ಆರೋಪಿ ವಿಚಾರಣೆ ವೇಳೆ ತಿಳಿಸಿದ್ದಾನೆ. ನಟಿಯನ್ನು ಅಪಹರಿಸಿ ಕೊಂಡೊಯ್ದ ದಾರಿಯಲ್ಲೇ ಶುಕ್ರವಾರ ಬೆಳಗ್ಗಿನ ಜಾವ ಪೊಲೀಸರು ಆರೋಪಿಯನ್ನು ಕರೆದೊಯ್ದು ಸಾಕ್ಷಿ ಸಂಗ್ರಹಿಸುವ ಮತ್ತು ಮೊಬೈಲ್ ಫೋನ್ ಪತ್ತೆಹಚ್ಚುವ ಕಾರ್ಯ ನಡೆಸಿದರು. ಆದರೆ ಮೊಬೈಲ್ ಫೋನ್ ಪತ್ತೆಯಾಗಿಲ್ಲ. ಇಂತಹ ಕೃತ್ಯಗಳನ್ನು ಇದುವರೆಗೆ ತಾನು ಮಾಡಿಲ್ಲ ಎಂದು ಆರೋಪಿ ಹೇಳಿದರೂ, ಆತ ಇನ್ನೂ ಕೆಲವು ನಟಿಯರನ್ನು ಈ ರೀತಿ ಬ್ಲಾಕ್‌ಮೇಲ್ ಮಾಡಿರುವ ಸಂಶಯವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
ಪ್ರಕರಣದಲ್ಲಿ ಶಾಮೀಲಾಗಿರುವ ಎಲ್ಲ ಆರೋಪಿಗಳನ್ನೂ ಬಂಧಿಸಿರುವ ಪೊಲೀಸನ್ನು ಶ್ಲಾಘಿಸಿರುವ ಹೆಚ್ಚುವರಿ ಪೊಲೀಸ್ ಉಪಮಹಾನಿರ್ದೇಶಕಿ ಬಿ.ಸಂಧ್ಯಾ, ಆರೋಪಿಗಳನ್ನು ತೀವ್ರ ವಿಚಾರಣೆ ನಡೆಸಲಾಗುತ್ತಿದ್ದು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು. ಆ ವೇಳೆ ಅವರನ್ನು ಕಸ್ಟಡಿಗೆ ಒಪ್ಪಿಸುವಂತೆ ಕೇಳುತ್ತೇವೆ ಎಂದವರು ತಿಳಿಸಿದ್ದಾರೆ.