ಬಂಟ್ವಾಳ: ಫೆ.26ರಂದು ಹಾಜಿ ಕೆ.ಪಿ. ಅಬ್ದುಲ್ ಜಬ್ಬಾರ್ ಉಸ್ತಾದ್ ರಿಗೆ ಸನ್ಮಾನ

ಬಂಟ್ವಾಳ : ಮುಹಿಯುದ್ದೀನ್ ಜುಮಾ ಮಸೀದಿ ಮಿತ್ತಬೈಲು-ಬಿ.ಸಿ.ರೋಡು ಹಾಗೂ ಅಧೀನ ಮದ್ರಸ ಕಮಿಟಿ ಹಾಗೂ ಸಂಘ-ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ವಿಶ್ವವಿಖ್ಯಾತ ಉಲಮಾ ಸಂಘಟನೆಯಾಗಿರುವ ಸಮಸ್ತ ಕೇರಳ ಜಂ-ಇಯ್ಯತುಲ್ ಉಲಮಾಇದರ ನೂತನ ಉಪಾಧ್ಯಕ್ಷರಾಗಿ ಇತ್ತೀಚೆಗಷ್ಟೆ ಆಯ್ಕೆಯಾದ, ಮಿತ್ತಬೈಲು ಮುಹಿಯುದ್ದೀನ್ ಜುಮಾ ಮಸೀದಿ ಮುದರ್ರಿಸ್ ಹಾಜಿ ಕೆ.ಪಿ. ಅಬ್ದುಲ್ ಜಬ್ಬಾರ್ ಉಸ್ತಾದ್ ಅವರಿಗೆ ಸನ್ಮಾನ ಸಮಾರಂಭವು ಫೆಬ್ರವರಿ 26 ರಂದು ಸಂಜೆ 4.30ಕ್ಕೆ ಮಸೀದಿ ವಠಾರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಮಸೀದಿ ಅಧ್ಯಕ್ಷ ಹಬೀಬುಲ್ಲಾ ತಿಳಿಸಿದರು.
ಬುಧವಾರ ಸಂಜೆ ಬಿ.ಸಿ.ರೋಡಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮೂಲತಃ ಲಕ್ಷದ್ವೀಪದ ಕಿಲ್ತಾನ್ ಎಂಬಲ್ಲಿನ ನಿವಾಸಿಯಾಗಿರುವ ಶೈಖುನಾ ಉಸ್ತಾದರು ಎಂಎಫ್‌ಬಿ ಹಾಗೂ ಎಂಎಫ್‌ಡಿ ಬಿರುದಾಂಕಿತರಾಗಿದ್ದು, ಆಧ್ಯಾತ್ಮಿಕ ಕ್ಷೇತ್ರದಲ್ಲಿ ತನ್ನದೇ ಆದ ವಿಶಿಷ್ಟ ಛಾಪನ್ನು ಮೂಡಿಸಿದವರು. 1971 ರಿಂದ ಸುದೀರ್ಘ 45 ವರ್ಷಗಳ ಕಾಲ ಮಿತ್ತಬೈಲು ಮುಹಿಯುದ್ದೀನ್ ಜುಮಾ ಮಸೀದಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಸುನ್ನೀ ಮುಸ್ಲಿಮರ ಗೌರವಾನ್ವಿತ ಗುರುವರ್ಯರಾಗಿರುವ ಶೈಖುನಾ ಜಬ್ಬಾರ್ ಉಸ್ತಾದ್ ಅವರು ಸರಳ-ಸಜ್ಜನಿಕೆಯ ವ್ಯಕ್ತಿತ್ವವನ್ನು ಮೈಗೂಡಿಸಿಕೊಂಡು ಜನ-ಮನದಲ್ಲಿ ಸದಾ ಬೇರೂರಿರುವ ಅಪರೂಪದ ವ್ಯಕ್ತಿತ್ವ ಆಗಿದ್ದಾರೆ.
ಇದೀಗ ಜಗತ್ತಿನ ಅತ್ಯುನ್ನತ ಪಂಡಿತ ಸಂಘಟನೆಯಾಗಿರುವ ಸಮಸ್ತ ಕೇರಳ ಜಂ-ಇಯ್ಯತುಲ್ ಉಲಮಾ ಇದರ ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದು, ಮಿತ್ತಬೈಲು ಜಮಾಅತರಾಗಿರುವ ನಮಗೆಲ್ಲರಿಗೂ ಅತ್ಯಂತ ಸಂತಸದ ವಿಚಾರವಾಗಿರುತ್ತದೆ. ಈ ಹಿನ್ನಲೆಯಲ್ಲಿ ಮಿತ್ತಬೈಲು ಕೇಂದ್ರ ಮಸೀದಿ ಹಾಗೂ ಅದರ ಅಧೀನದಲ್ಲಿರುವ ಎಲ್ಲ ಮದ್ರಸ ಕಮಿಟಿ ಹಾಗೂ ಸಂಘ-ಸಂಸ್ಥೆಗಳ ಆಶ್ರಯದಲ್ಲಿ ಉಸ್ತಾದರಿಗೆ ಅಂತರಾಳದ ಅಭಿಮಾನ ಪ್ರಕಟಪಡಿಸುವ ಸಲುವಾಗಿ ಈ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಸನ್ಮಾನ ಸಮಾರಂಭದಲ್ಲಿ ಸಯ್ಯಿದ್ ಅಲೀ ತಂಙಳ್ ಕುಂಬೋಳ್ ದುವಾಶಿರ್ವಚನಗೈಯಲಿದ್ದು, ಅತ್ರಾಡಿ ಖಾಝಿ ಹಾಜಿ ವಿ.ಕೆ. ಅಬೂಬಕ್ಕರ್ ಮುಸ್ಲಿಯಾರ್ ಉದ್ಘಾಟಿಸುವರು.
ಮಿತ್ತಬೈಲು ಎಂಜೆಎಂ ಅಧ್ಯಕ್ಷ ಹಬೀಬುಲ್ಲಾ ಅದ್ಯಕ್ಷತೆ ವಹಿಸುವರು. ಕೇರಳ ರಾಜ್ಯ ದಾರಿಮೀಸ್ ಎಸೋಸಿಯೇಶನ್ ಅಧ್ಯಕ್ಷ ಸಯ್ಯಿದ್ ಅಬ್ದುಲ್ ರಶೀದಲೀ ಶಿಹಾಬ್ ತಂಙಳ್ ಪಾಣಕ್ಕಾಡ್ ಸನ್ಮಾನ ನೆರವೇರಿಸುವರು.
ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್, ಪೈವಳಿಕೆ ಖಾಝಿ ಅಬ್ದುಲ್ ಖಾದರ್ ಮುಸ್ಲಿಯಾರ್, ಸಯ್ಯಿದ್ ಅಮೀರ್ ತಂಙಳ್ ಕಿನ್ಯ, ಕುಂಬಳೆ ಇಮಾಮ್ ಶಾಫಿ ಇಸ್ಲಾಮಿಕ್ ಅಕಾಡೆಮಿ ಪ್ರಾಂಶುಪಾಲ ಅಲ್‌ಹಾಜ್ ಎಂ.ಎ. ಖಾಸಿಂ ಮುಸ್ಲಿಯಾರ್, ಎಸ್ಕೆಎಸ್ಸೆಸ್ಸೆಫ್ ಕರ್ನಾಟಕ ರಾಜ್ಯಾಧ್ಯಕ್ಷ ಪ್ರೊಫೆಸರ್ ಅನೀಸ್ ಕೌಸರಿ, ಸಮಸ್ತ ಮುಶಾವರ ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಲ್‌ಹಾಜ್ ಬಿ.ಕೆ. ಅಬ್ದುಲ್ ಖಾದರ್ ಅಲ್-ಖಾಸಿಮಿ, ದ.ಕ. ಜಿಲ್ಲಾ ಮದ್ರಸ ಮ್ಯಾನೇಜ್‌ಮೆಂಟ್ ಅಧ್ಯಕ್ಷ ಹಾಜಿ ಐ. ಮೊದಿನಬ್ಬ, ರಾಜ್ಯ ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ಆಹಾರ ಸಚಿವ ಯು.ಟಿ. ಖಾದರ್, ಕರ್ನಾಟಕ ಗೇರು ಅಭಿವೃದ್ದಿ ನಿಗಮದ ಅಧ್ಯಕ್ಷ ಹಾಜಿ ಬಿ.ಎಚ್. ಖಾದರ್, ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ಎ.ಎಂ. ರಶೀದ್ ಹಾಜಿ, ಉದ್ಯಮಿಗಳಾದ ಹಾಜಿ ಝಕರಿಯ್ಯ್ ಜೋಕಟ್ಟೆ, ಹಾಜಿ ಬಿ. ಹುಸೈನ್ ಸುಲ್ತಾನ್ ಕೊಡಾಜೆ, ಹಾಜಿ ಬಿ.ಎಂ. ಶರೀಫ್, ಪುರಸಭಾ ಉಪಾಧ್ಯಕ್ಷ ಮುಹಮ್ಮದ್ ನಂದರಬೆಟ್ಟು, ಸದಸ್ಯ ಮುಹಮ್ಮದ್ ಶರೀಫ್ ಶಾಂತಿಅಂಗಡಿ, ಮಿತ್ತಬೈಲು ಮಸೀದಿ ಸಹ ಮುದರ್ರಿಸ್ ಹಾಜಿ ಅಬ್ದುಲ್ ಹಮೀದ್ ದಾರಿಮಿ, ಮಿತ್ತಬೈಲು ಮದ್ರಸ ಮುಖ್ಯ ಶಿಕ್ಷಕ ಎ.ಎಚ್. ಅಬ್ದುಲ್ ಹಮೀದ್ ದಾರಿಮಿ ಮೊದಲಾದವರು ಭಾಗವಹಿಸುವರು ಎಂದವರು ವಿವರಿಸಿದರು.







