2ಕೋಟಿ ರೂ.ವಂಚನೆ ಆರೋಪ; ಪತ್ನಿ ಸೇರಿ ಮೂವರ ವಿರುದ್ಧ ಎಫ್‌ಐಆರ್
ಜ್ಯೋತಿಷಿ ಚಂದ್ರಶೇಖರ್ ಭಟ್ ನಾಪತ್ತೆ
ಬೆಂಗಳೂರು, ಫೆ.24: ಉದ್ಯಮಿಯೊಬ್ಬರಿಗೆ 2 ಕೋಟಿ ರೂ. ವಂಚನೆ ಮಾಡಿದ ಆರೋಪದ ಮೇಲೆ ಜ್ಯೋತಿಷಿ ಚಂದ್ರಶೇಖರ್ ಭಟ್ ಸೇರಿ ಮೂವರ ವಿರುದ್ಧ ಇಲ್ಲಿನ ಆರ್.ಟಿ.ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾದ ಬೆನ್ನಲ್ಲೇ, ಅವರು ನಾಪತ್ತೆಯಾಗಿದ್ದಾರೆ.
ಆರ್.ಟಿ.ನಗರದ ನಿವಾಸಿ ಹಾಗೂ ಉದ್ಯಮಿ ಅಶ್ರಫ್ ಅಲಿ ಎಂಬುವರು ತಮಗೆ ಜ್ಯೋತಿಷಿ ಚಂದ್ರಶೇಖರ್ ಭಟ್, ಅವರ ಪತ್ನಿ ರಜಿನಿ ಸಿ.ಭಟ್ ಹಾಗೂ ಗಿರೀಶ್ ಕಾಮತ್ ಎಂಬುವರು 2 ಕೋಟಿ ರೂ. ವಂಚನೆ ಮಾಡಿದ್ದಾರೆ ಎಂದು ಆರೋಪಿಸಿ ಆರ್.ಟಿ.ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಅರಮನೆ ಮೈದಾನದ ಸುತ್ತಾಮುತ್ತ ಜಾಹೀರಾತು ಫಲಕಗಳು (ಹೋರ್ಡಿಂಗ್ಸ್) ಕೊಡಿಸುವ ವಿಚಾರವಾಗಿ 2 ಕೋಟಿ ರೂಪಾಯಿ ದುಡ್ಡು ಪಡೆದುಕೊಂಡಿದ್ದ ಜ್ಯೋತಿಷಿ ಚಂದ್ರಶೇಖರ್ ಭಟ್ ಈಗ ವಂಚಿಸಿದ್ದಾರೆ.ಅಲ್ಲದೆ, ಮೂವರು ಆರೋಪಿಗಳು ಇದಕ್ಕೆ ಸಂಬಂಧಪಟ್ಟಂತೆ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿ, ನನಗೆ ಕೋಟ್ಯಂತರ ರೂಪಾಯಿ ವಂಚನೆ ಮಾಡಿದ್ದಾರೆ ಎಂದು ಅಶ್ರಫ್ ಅಲಿ ದೂರಿನಲ್ಲಿ ಆರೋಪಿಸಿದ್ದಾರೆ.
ವಂಚನೆ ಪ್ರಕರಣ ಸಂಬಂಧ ಮೊಕದ್ದಮೆ ದಾಖಲಿಸಿಕೊಂಡಿರುವ ಆರ್.ಟಿ.ನಗರ ಠಾಣಾ ಪೊಲೀಸರು, ಜ್ಯೋತಿಷಿ ಚಂದ್ರಶೇಖರ್‌ಭಟ್ ಸೇರಿ ಮೂವರ ಪತ್ತೆಗಾಗಿ ಶೋಧ ಕಾರ್ಯ ಮುಂದುವರೆಸಿದ್ದಾರೆ.