ಪತ್ರಿಕೆಗಳು ಸಮಾಜದ ಕೈಗನ್ನಡಿ: ಗೋಪೀನಾಥ ಪಡಂಗ

ಮುಲ್ಕಿ, ಫೆ.24: ಪತ್ರಿಕೆಗಳು ಸಮಾಜದ ಕೈಗನ್ನಡಿಗಳಾಗಿ ಸಮಾಜಿಕ ಕ್ರಾಂತಿಗಳನ್ನು ಮಾಡಿದರೆ ದೇಶ ಅಭಿವೃದ್ಧಿ ಸಾಧ್ಯ ಎಂದು ಮುಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಗೋಪೀನಾಥ ಪಡಂಗ ಹೇಳಿದರು.
ಮುಲ್ಕಿಯಲ್ಲಿ ಶುಕ್ರವಾರ ನಡೆದ ಹೊಸ ಅಂಗಣ ಪತ್ರಿಕೆಯ 'ತಿಂಗಳ ಬೆಳಕು' ಕಾರ್ಯಕ್ರಮದಲ್ಲಿ ಹಿರಿಯ ಸಾಧಕ, ಕೆ.ಎಸ್. ರಾವ್ ನಗರದ ನಾರಾಯಣ ಗುರು ಸಮಾಜ ಸೇವಾ ಸಂಘದ ಅಧ್ಯಕ್ಷ ಕೆ.ಎಸ್.ರಾವ್ ನಗರದ ರಾಘವ ಸುವರ್ಣ ಅವರನ್ನು ಸನ್ಮಾನಿಸಿ ಅವರು ಮಾತನಾಡಿದರು.
ಹಿರಿಯ ರಂಗಕರ್ಮಿಯಾಗಿ ಪ್ರಸಾದನ ಕಲಾವಿದರಾಗಿ, ಸಂಘಟಕರಾಗಿ, ಸಮಾಜದ ದೀನ ವರ್ಗದ ಅಭ್ಯುದಯಕ್ಕಾಗಿ ಸೇವೆ ಸಲ್ಲಿಸುತ್ತಿರುವ ರಾಘವ ಸುವರ್ಣರನ್ನು ಯುವ ಸಮಾಜಕ್ಕೆ ಪರಿಚಯಿಸುವ ಕಾರ್ಯ ಅಭಿನಂದನೀಯ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ರಾಘವ ಸುವರ್ಣ, ನಾರಾಯಣ ಗುರುಗಳ ತತ್ವ ಮತ್ತು ಆದರ್ಶದಂತೆ ಗ್ರಾಮೀಣ ದೀನ ವರ್ಗದ ಆಶಾಕಿರಣವಾಗಿ ಕೆ.ಎಸ್.ರಾವ್ ನಗರದ ನಾರಾಯಣಗುರು ಸಂಘವು ನಡೆದುಕೊಂಡು ಬರುತ್ತಿದೆ. ಎಲ್ಲಾ ಜಾತಿ ವರ್ಗದ ಜನರಿಗೆ ಸೇವೆ ನೀಡುತ್ತಾ ಜನರನ್ನು ಸಂಘಟನಾತ್ಮಕವಾಗಿ ಬಲಪಡಿಸಿ ಅಭಿವೃದ್ಧಿಯನ್ನು ಗಳಿಸಿಕೊಂಡಿದೆ ಮುಂದೆಯೂ ಈ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸಮಾಜದ ಸಹಕಾರಗಳನ್ನು ಆಶಿಸುವುದುದಾಗಿ ತಿಳಿಸಿದರು.
ಈ ಸಂದರ್ಭ ಹೊಸ ಅಂಗಣ ಪತ್ರಿಕೆ ಸಂಪಾದಕ ಹರಿಶ್ಚಂದ್ರ ಪಿ.ಸಾಲ್ಯಾನ್ ಅವರ 64ನೆ ಜನ್ಮದಿನಾಚರಣೆ ಆಚರಿಸಿ ಅಭಿನಂದಿಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಹರಿಶ್ಚಂದ್ರ.ಪಿ.ಸಾಲ್ಯಾನ್ ವಹಿಸಿದ್ದರು. ಉದ್ಯಮಿ ವಾಸು ಪೂಜಾರಿ ಚಿತ್ರಾಪು, ವಿಶ್ರಾಂತ ಪ್ರಾದ್ಯಾಪಕ ಡಾ.ಜಗದೀಶ, ಮುಲ್ಕಿ ನಾಲ್ಕು ಪಟ್ಣ ಮೊಗವೀರ ಸಭಾದ ಅಧ್ಯಕ್ಷ ಗುರುವಪ್ಪ ಕೋಟ್ಯಾನ್, ಮಾಜಿ ಅಧ್ಯಕ್ಷ ಭಾಸ್ಕರ ಪುತ್ರನ್, ಉದ್ಯಮಿ ಐಕಳಗುತ್ತು ಜಯಪಾಲ ಶೆಟ್ಟಿ ,ಮುಲ್ಕಿ ರೋಟರಿ ಪೂರ್ವಾಧ್ಯಕ್ಷ ರವಿಚಂದ್ರ ಅತಿಥಿಗಳಾಗಿದ್ದರು.
ವಾಮನ ಕೋಟ್ಯಾನ್ ನಡಿಕುದ್ರು ಸ್ವಾಗತಿಸಿದರು. ರವಿಚಂದ್ರ ನಿರೂಪಿಸಿದರು.







