ಬಿಜೆಪಿಯಿಂದ ಕೋಮು ಗಲಭೆ ಸೃಷ್ಟಿಸುವ ಹುನ್ನಾರ: ಪಿಯುಸಿಎಲ್
ಮಂಗಳೂರು, ೆ.24: ದ.ಕ. ಜಿಲ್ಲೆಯಲ್ಲಿ ಬಿಜೆಪಿ, ಸಂಘ ಪರಿವಾರ, ವಿಎಚ್‌ಪಿ, ಬಜರಂ ಗದಳ ಮೊದಲಾದ ಸಂಘಟನೆಗಳು ಕರೆ ನೀಡಿರುವ ಹರತಾಳ ಕೋಮುಗಲಭೆ ಸೃಷ್ಟಿಸುವ ಹುನ್ನಾರವಾಗಿದೆ ಎಂದು ಪಿಯುಸಿಎಲ್ ದ.ಕ. ಜಿಲ್ಲಾ ಸಮಿತಿಯು ಆಕ್ಷೇಪಿಸಿದೆ. ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಪಿಯುಸಿಎಲ್ ರಾಷ್ಟ್ರೀಯ ಉಪಾಧ್ಯಕ್ಷ ಪಿ.ಬಿ. ಡೇಸಾ, ಕೇರಳದಲ್ಲಿ ಹಿಂದೂ ಕಾರ್ಯಕರ್ತರ ಹತ್ಯೆ ನಡೆಯುತ್ತಿದೆ ಎಂದು ಆಪಾದಿಸಿ ಇಡೀ ಸಮಾಜವನ್ನು ತಪ್ಪುದಾರಿಗೆ ಎಳೆಯುತ್ತಿರುವುದು ಖಂಡನೀಯ ಎಂದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟಿಸುವ ಹಕ್ಕು ಎಲ್ಲರಿಗೂ ಇದೆ. ಆದರೆ ಜಿಲ್ಲಾ ಬಂದ್‌ಗೆ ಕರೆ ನೀಡಿರುವುದು ಸುಪ್ರೀಂ ಕೋರ್ಟ್ ತೀರ್ಪಿನ ಉಲ್ಲಂಘನೆ ಎಂದು ಹೇಳಿದರು. ಆದರೆ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಆಯ್ಕೆಯಾಗಿರುವವರು. ಅವರಿಗೆ ಯಾವ ರಾಜ್ಯಕ್ಕೂ ಭೇಟಿ ನೀಡಲು ಅವಕಾಶವಿದೆ. ಇಂತಹ ಸಂದರ್ಭ ಸುಳ್ಳು ಅಪವಾದಗಳ ಮೂಲಕ ಕರ್ನಾಟಕ ರಾಜ್ಯಕ್ಕೆ ಅವರ ಭೇಟಿಗೆ ಅಡ್ಡಿ ಪಡಿಸುವುದು ಖಂಡನೀಯ.
ಕೇರಳದಲ್ಲಿ ಬಿಜೆಪಿಗೆ ಸರಕಾರ ರಚಿಸಲು ಸಾಧ್ಯವಾಗಿಲ್ಲದಿರುವಾಗ ಈ ರೀತಿಯ ಅಪಪ್ರಚಾರಗಳನ್ನು ನಡೆಸಲಾಗುತ್ತಿದೆ ಎಂದು ಪಿಯುಸಿಎಲ್ ಸಮಿತಿಯ ಸದಸ್ಯ ನಿರ್ಮಲ್ ಕುಮಾರ್ ಆರೋಪಿಸಿದರು. ಪೊಲೀಸರು ಕಾನೂನು ಕೈಗೆತ್ತಿಕೊಳ್ಳುವವರ ಹಾಗೂ ಸಮಾಜದ ಶಾಂತಿ ಹಾಗೂ ಸಾಮರಸ್ಯ ಕದಡುತ್ತಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪಿಯುಸಿಎಲ್ ದ.ಕ. ಜಿಲ್ಲಾ ಅಧ್ಯಕ್ಷ ಮುಹಮ್ಮದ್ ಕಬೀರ್ ಆಗ್ರಹಿಸಿದರು.





