ಕೊಂಕಣಿ ಅಕಾಡಮಿಯ ‘ಶಿಖರ’ ಸ್ಮರಣಿಕೆ ಲೋಕಾರ್ಪಣೆ

ಮಂಗಳೂರು, ಫೆ.25: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ರೋಯ್ ಕ್ಯಾಸ್ತಲಿನೊ ಅವರ ಅಧಿಕಾರಾವಧಿಯ (2014 ಫೆ.26ರಿಂದ 2017 ಫೆ.25) ವಿವಿಧ ಕಾರ್ಯ ಚಟುವಟಿಕೆಗಳ ದಾಖಲೀಕರಣ ಮಾಡಿದ ಸ್ಮರಣಿಕೆ ‘ಶಿಖರ’ವನ್ನು ಮಂಗಳೂರಿನ ಬಿಷಪ್ ಅ. ವಂ. ಡಾ.ಅಲೋಶಿಯಸ್ ಪಾವ್ಲ್ ಡಿಸೋಜ ಬಿಡುಗಡೆಗೊಳಿಸಿದರು.
ಕೊಡಿಯಾಲ್‌ಬೈಲ್‌ನಲ್ಲಿರುವ ಬಿಷಪ್ಸ್ ಹೌಸ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೊಂಕಣಿಗರು ಮಾತೃಭಾಷೆಯಲ್ಲೇ ಮಾತನಾಡುವ ಮೂಲಕ ಕೊಂಕಣಿ ಸಂಸ್ಕೃತಿಯನ್ನು ಉಳಿಸುವ ಕೆಲಸ ಮಾಡಬೇಕು. ಅಗಾಧ ಶಬ್ಧ ಭಂಡಾರದಿಂದ ಕೂಡಿರುವ ಕೊಂಕಣಿ ಭಾಷೆ ಮಾತನಾಡುವ ಬಗ್ಗೆ ಕೀಳರಿಮೆ ಬೇಡ ಎಂದು ಸಲಹೆ ನೀಡಿದರು.
ಕ್ರೈಸ್ತ ಧರ್ಮಪ್ರಾಂತ ನಡೆಸುತ್ತಿರುವ ಕೆಲವು ಶಾಲೆಗಳಲ್ಲಿ ಕೊಂಕಣಿಯನ್ನು ತೃತೀಯ ಭಾಷೆಯಾಗಿ ಕಲಿಯಲು ಅವಕಾಶ ಕಲ್ಪಿಸಲಾಗಿದೆ. ಇನ್ನುಳಿದ ಶಾಲೆಗಳಲ್ಲಿಯೂ ಕೊಂಕಣಿ ಕಲಿಕೆ ಆರಂಭಿಸಲು ಪ್ರೋತ್ಸಾಹ ನೀಡಲಾಗುವುದು. ರೋಯ್ ಕ್ಯಾಸ್ತಲಿನೊ ಕೊಂಕಣಿ ಅಕಾಡಮಿಯ ಅಧ್ಯಕ್ಷ ಸ್ಥಾನ ವಹಿಸಿಕೊಂಡ ಬಳಿಕ ಕೊಂಕಣಿಗೆ ಸಂಬಂಧಿಸಿ ಬಹಳಷ್ಟು ಕೆಲಸಗಳನ್ನು ಮಾಡಿದ್ದಾರೆ ಎಂದು ಬಿಷಪ್ ಹೇಳಿದರು.
ಕೊಂಕಣಿ ಭಾಷೆಗೆ ವಿಶೇಷ ಕೊಡುಗೆ ಸಲ್ಲಿಸುತ್ತಿರುವುದನ್ನು ಗುರುತಿಸಿ ಬಿಷಪ್ ಅವರನ್ನು ಅಕಾಡಮಿಯ ವತಿಯಿಂದ ಸಮ್ಮಾನಿಸಲಾಯಿತು.
ಅದೇ ರೀತಿ ರೋಯ್ ಕ್ಯಾಸ್ತೆಲಿನೊ ಅವರನ್ನು ಬಿಷಪ್ ಅವರು ಧರ್ಮಪ್ರಾಂತದ ಪರವಾಗಿ ಸಮ್ಮಾನಿಸಿದರು.
ಶಾಲೆಗಳಲ್ಲಿ ಕೊಂಕಣಿ ಕಲಿಕೆಗೆ ಸಂಬಂಧಿಸಿ ಅತ್ಯುತ್ತಮ ಕೊಂಕಣಿ ಶಿಕ್ಷಕ ಪ್ರಶಸ್ತಿ ದಿ. ಜೆಸ್ಸಿ ಸಿಕ್ವೇರ ಸ್ಮಾರಕ ಪುರಸ್ಕಾರವನ್ನು ಕಿನ್ನಿಕಂಬಳ ರೋಸ ಮಿಸ್ತಿಕಾ ಶಾಲೆಯ ಶಿಕ್ಷಕ ಲ್ಯಾನ್ಸಿ ಸಿಕ್ವೇರಾ ಅವರಿಗೆ ನೀಡಲಾಯಿತು.
ಅಕಾಡಮಿಯ ಅಧ್ಯಕ್ಷ ರೋಯ್ ಕ್ಯಾಸ್ತಲಿನೊ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ರಿಜಿಸ್ಟ್ರಾರ್ ಡಾ.ಬಿ.ದೇವದಾಸ್ ಪೈ ವಂದಿಸಿದರು.
ಧರ್ಮಪ್ರಾಂತದ ಪ್ರಧಾನ ಗುರು ಡೆನಿಸ್ ಮೊರಾಸ್ ಪ್ರಭು, ಸಾರ್ವಜನಿಕ ಸಂಪರ್ಕ ಅಧಿಕಾರಿ ಫಾ.ವಿಲಿಯಂ ಮಿನೇಜಸ್, ಶಾಸಕ ಜೆ.ಆರ್. ಲೋಬೊ ಉಪಸ್ಥಿತರಿದ್ದರು. ವಿಕ್ಟರ್ ಮಥಾಯಸ್ ಕಾರ್ಯಕ್ರಮ ನಿರ್ವಹಿಸಿದರು.







