‘ಎಬಿವಿಪಿಗೆ ಹೆದರುವುದಿಲ್ಲ’:ವೈರಲ್ ಆದ ಕಾರ್ಗಿಲ್ ಹುತಾತ್ಮನ ಪುತ್ರಿಯ ಫೇಸ್‌ಬುಕ್ ಪೋಸ್ಟ್
ಹೊಸದಿಲ್ಲಿ,ಫೆ.25: ಬುಧವಾರ ದಿಲ್ಲಿಯ ರಮಜಸ್ ಕಾಲೇಜಿನಲ್ಲಿ ಶಾಂತಿಯುತ ಪ್ರತಿಭಟನೆಯಲ್ಲಿ ತೊಡಗಿದ್ದ ವಿದ್ಯಾರ್ಥಿಗಳೊಂದಿಗೆ ಎಬಿವಿಪಿ ವಿದ್ಯಾರ್ಥಿಗಳ ಘರ್ಷಣೆಯ ಬಳಿಕ ಲೇಡಿ ಶ್ರೀರಾಮ ಕಾಲೇಜಿನ ವಿದ್ಯಾರ್ಥಿನಿ ಗುರ್‌ಮೆಹರ ಕೌರ್ ತನ್ನ ಭಾವಚಿತ್ರದೊಂದಿಗೆ ವಿದ್ಯಾರ್ಥಿಗಳ ಮೇಲಿನ ಹಲ್ಲೆ ಕುರಿತು ತನ್ನ ಅಭಿಪ್ರಾಯವನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ ಮಾಡಿದ್ದಳು. ದಿಲ್ಲಿ ವಿವಿಯಲ್ಲಿ ವಿಜೃಂಭಿಸುತ್ತಿರುವ ‘ಭಯದ ನಿರಂಕುಶತೆ ’ಯನ್ನು ಪ್ರತಿಭಟಿಸಿ ಈ ಕಾರ್ಗಿಲ್ ಹುತಾತ್ಮನ ಪುತ್ರಿಯ ಈ ಪೋಸ್ಟ್ ವೈರಲ್ ಆಗಿದೆ.
ರಮಜಸ್ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ವಿಚಾರ ಸಂಕಿರಣಕ್ಕೆ ಕಳೆದ ವರ್ಷ ದೇಶದ್ರೋಹದ ಆರೋಪ ಹೊರಿಸಲ್ಪಟ್ಟಿದ್ದ ಜೆಎನ್‌ಯು ವಿದ್ಯಾರ್ಥಿಗಳ ಪೈಕಿ ಓರ್ವನಾಗಿರುವ ಉಮರ್ ಖಾಲಿದ್‌ಗೆ ನೀಡಿದ್ದ ಆಹ್ವಾನವನ್ನು ರದ್ದುಗೊಳಿಸಿದ್ದನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳೊಂದಿಗೆ ಎಬಿವಿಪಿ ಕಾರ್ಯಕರ್ತರು ಘರ್ಷಣೆಗಿಳಿದಿದ್ದು, 20ಕ್ಕೂ ಅಧಿಕ ವಿದ್ಯಾರ್ಥಿಗಳು ಗಾಯಗೊಂಡಿದ್ದರು.
ಅಂದೇ ಸಂಜೆ ಗುರ್‌ಮೆಹರ್ ತನ್ನ ಸಂದೇಶವನ್ನು ಮತ್ತು ಕೈಬರದಲ್ಲಿದ್ದ ಭಿತ್ತಿಪತ್ರವನ್ನು ಹಿಡಿದುಕೊಂಡ ತನ್ನ ಚಿತ್ರವನ್ನು ಪೋಸ್ಟ್ ಮಾಡಿದ್ದಳು. ’ನಾನು ದಿಲ್ಲಿ ವಿವಿಯ ವಿದ್ಯಾರ್ಥಿನಿ. ನಾನು ಎಬಿವಿಪಿಗೆ ಹೆದರುವುದಿಲ್ಲ. ನಾನು ಒಂಟಿಯಾಗಿಲ್ಲ. ಭಾರತದ ಪ್ರತಿಯೊಬ್ಬ ವಿದ್ಯಾರ್ಥಿ/ವಿದ್ಯಾರ್ಥಿನಿ ನನ್ನ ಜೊತೆಯಲ್ಲಿದ್ದಾರೆ ’’ ಎಂಬ ಈ ಬರಹ ಸ್ಟುಡೆಂಟ್ಸ್ ಅಗೇನ್‌ಸ್ಟ್ ಎಬಿವಿಪಿ ಹ್ಯಾಷ್‌ಟ್ಯಾಗ್ ಹೊಂದಿತ್ತು.
1999ರ ಕಾರ್ಗಿಲ್ ಯುದ್ಧದಲ್ಲಿ ಕ್ಯಾಪ್ಟನ್ ಮಂದೀಪ್ ಸಿಂಗ್ ಹುತಾತ್ಮರಾದಾಗ ಗುರ್‌ಮೆಹರ್ ಕೇವಲ ಎರಡು ವರ್ಷದ ಮಗುವಾಗಿದ್ದಳು. ಗುರ್‌ಮೆಹರ್ ಹಿಂದೊಮ್ಮೆ ಫೇಸ್‌ಬುಕ್‌ನಲ್ಲಿ ಹೇಳಿಕೊಂಡಂತೆ ಪಾಕಿಸ್ತಾನವನ್ನು ಮತ್ತು ಪಾಕಿಸ್ತಾನಿಗಳನ್ನು ದ್ವೇಷಿಸುತ್ತಲೇ ಬೆಳೆದಿದ್ದ ಆಕೆ ಆರರ ಹರೆಯದಲ್ಲಿದ್ದಾಗ ಬುರ್ಖಾ ಧರಿಸಿದ್ದ ಮಹಿಳೆಯೋರ್ವಳನ್ನು ಕಂಡು ಈಕೆಯೇ ತನ್ನ ತಂದೆಯ ಸಾವಿಗೆ ಹೊಣೆಗಾರಳು ಎಂಬ ವಿಚಿತ್ರ ಕಾರಣದಿಂದ ಆಕೆಯನ್ನು ಚೂರಿಯಿಂದ ಇರಿದಿದ್ದಳು. ಆಗ ತಾಯಿ, ಮಂದೀಪ್‌ರನ್ನು ಕೊಂದಿದ್ದು ಪಾಕಿಸ್ತಾನವಲ್ಲ, ಅವರನ್ನು ಕೊಂದಿದ್ದುಯುದ್ಧ ಎನ್ನುವುದನ್ನು ಗುರ್‌ಮೆಹರ್‌ಗೆ ಅರ್ಥ ಮಾಡಿಸಿದ್ದಳು.
ಅಮಾಯಕ ವಿದ್ಯಾರ್ಥಿಗಳ ಮೇಲೆ ಎಬಿವಿಪಿ ದಾಳಿ ಆತಂಕಕಾರಿಯಾಗಿದೆ ಎಂದು ತನ್ನ ಫೇಸ್‌ಬುಕ್ ಪೋಸ್ಟ್‌ನಲ್ಲಿ ಬಣ್ಣಿಸಿರುವ ಗುರ್‌ಮೆಹರ್,ಅದು ಪ್ರತಿಭಟನಾಕಾರರ ಮೇಲಿನ ದಾಳಿಯಲ್ಲ,ಅದು ಪ್ರತಿಯೊಬ್ಬ ಭಾರತೀಯನ ಹೃದಯದಲ್ಲಿ ಸ್ಥಾನ ಪಡೆದುಕೊಂಡಿರುವ ಪ್ರಜಾಪ್ರಭುತ್ವದ ಮೇಲಿನ ದಾಳಿಯಾಗಿದೆ.
ನೀವು ನಮ್ಮತ್ತ ಎಸೆಯುವ ಕಲ್ಲುಗಳು ನಮ್ಮ ದೇಹಗಳಿಗೆ ನೋವನ್ನುಂಟು ಮಾಡಬಹುದು, ಆದರೆ ನಮ್ಮ ಚಿಂತನೆಗಳಿಗಲ್ಲ. ಈ ಪ್ರೊಫೈಲ್ ಚಿತ್ರವು ಭಯದ ನಿರಂಕುಶತೆಯ ವಿರುದ್ಧ ಪ್ರತಿಭಟನೆಯ ನನ್ನ ವಿಧಾನವಾಗಿದೆ ಎಂದು ಹೇಳಿದ್ದಾಳೆ.
ಈ ಪೋಸ್ಟ್‌ನ ಬೆನ್ನಿಗೇ ಆಕೆಗೆ ಬೆಂಬಲದ ಮಹಾಪೂರವೇ ಹರಿದುಬಂದಿದೆ. ಸಾವಿರಾರು ಜನರು ಅದನ್ನು ಶೇರ್ ಮಾಡಿಕೊಂಡಿದ್ದಾರೆ. ಎಷ್ಟೋ ಜನರು ಗುರ್‌ಮೆಹರ್ ಹಿಡಿದುಕೊಂಡಿದ್ದ ಭತ್ತಿಪತ್ರವನ್ನು ಹಿಡಿದ ತಮ್ಮ ಪ್ರೊಫೈಲ್ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ.