27 ವರ್ಷಗಳಿಂದ ಮುಚ್ಚಿದ್ದ ದೇವಸ್ಥಾನವನ್ನು ಶಿವರಾತ್ರಿ ಆಚರಣೆಗಾಗಿ ತೆರೆದು ಕೊಟ್ಟ ಕಾಶ್ಮೀರಿ ಮುಸ್ಲಿಮರು

ಬಂಡೀಪುರ (ಕಾಶ್ಮೀರ),ಫೆ.25: ಉತ್ತರ ಕಾಶ್ಮೀರದ ಬಂಡೀಪುರ ಜಿಲ್ಲೆಯ ಸಂಬಾಲ್ ಪ್ರದೇಶದ ಮುಸ್ಲಿಮರು ಕಳೆದ 27 ವರ್ಷಗಳಿಂದ ಮುಚ್ಚಿದ್ದ ನಂದಕಿಶೋರ್ ದೇವಾಲಯವನ್ನು ಶಿವರಾತ್ರಿ ಆಚರಣೆಗಾಗಿ ಹಿಂದೂ ಬಾಂಧವರಿಗೆ ತೆರೆದುಕೊಟ್ಟು, ಅಪರೂಪದ ಕೋಮುಸೌಹಾರ್ದಕ್ಕೆ ಸಾಕ್ಷಿಯಾದರು.
ಇದು ಈ ಭಾಗದಿಂದ ವಲಸೆ ಹೋಗಿರುವ ಹಿಂದೂ ಬಾಂಧವರನ್ನು ಮತ್ತೆ ಸ್ವಕ್ಷೇತ್ರಕ್ಕೆ ಕರೆತರುವ ಪ್ರಯತ್ನದ ಒಂದು ಅಂಗವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. 27 ವರ್ಷಗಳ ಬಳಿಕ ಈ ದೇವಸ್ಥಾನದಲ್ಲಿ ಹಿಂದೂಗಳು ಶಿವರಾತ್ರಿ ಆಚರಿಸಿದರು. ಜತೆಗೆ ವಲಸೆ ಹೋಗಿರುವ ಕಾಶ್ಮೀರಿ ಪಂಡಿತರು ನಮ್ಮೊಂದಿಗೆ ಸಹಬಾಳ್ವೆಗಾಗಿ ಮರಳಿ ಬನ್ನಿ ಎಂಬ ಸಂದೇಶ ರವಾನಿಸಿದರು.
ಈ ಕಣಿವೆ ಪ್ರದೇಶದಿಂದ ಕಾಶ್ಮೀರಿ ಪಂಡಿತರು ಸಾಮೂಹಿಕವಾಗಿ ವಲಸೆ ಹೋದ ಬಳಿಕ 1990ರಲ್ಲಿ ಈ ದೇವಸ್ಥಾನ ಮುಚ್ಚಲಾಗಿತ್ತು. ಮಂದಿರ ತೆರೆಯುವ ಸಲುವಾಗಿ ಜಾತಿ ಭೇದ ಮರೆತು ನೂರಾರು ಮಂದಿ ದೇವಸ್ಥಾನದ ಆವರಣವನ್ನು ಶುಚಿಗೊಳಿಸಿ ಪೂಜೆಗೆ ಅಣಿಮಾಡಿಕೊಟ್ಟರು. ನೂರಾರು ಮಂದಿ ಕಾಶ್ಮೀರಿ ಮುಸ್ಲಿಮರು ಕೂಡಾ ದೇವಸ್ಥಾನದಲ್ಲಿ ಸಾಮೂಹಿಕ ಪ್ರಾರ್ಥನೆಯಲ್ಲಿ ತೊಡಗಿ, ಶಾಂತಿ ಹಾಗೂ ಸಹಬಾಳ್ವೆಗಾಗಿ ಪ್ರಾರ್ಥನೆ ಸಲ್ಲಿಸಿದರು. ಕಾಶ್ಮೀರಿ ಪಂಡಿತರು ಇಲ್ಲದ ಕಾಶ್ಮೀರ ಪರಿಪೂರ್ಣವಲ್ಲ ಎಂದು ಸೇರಿದ್ದ ಮಂದಿ ಅಭಿಪ್ರಾಯಪಟ್ಟರು.
"ಕಾಶ್ಮೀರಿ ಪಂಡಿತರು ಮರಳಿ ಬರಬೇಕು ಎನ್ನುವುದು ನಮ್ಮ ಆಹ್ವಾನ. 1990ರ ಮುನ್ನ ನಮ್ಮ ನೋವು ನಲಿವುಗಳನ್ನು ನಾವು ಹಂಚಿಕೊಳ್ಳುತ್ತಿದ್ದೆವು. ಕಾಶ್ಮೀರಿ ಪಂಡಿತರು ನಮಗೆ ಬೋಧನೆ ಮಾಡುತ್ತಿದ್ದರು. ಜತೆಯಾಗಿಯೇ ಒಂದೇ ಕುಟುಂಬದವರಂತೆ ನಾವು ವಾಸಿಸುತ್ತಿದ್ದೆವು" ಎಂದು ಮುಹಮ್ಮದ್ ಸುಲ್ತಾನ್ ಈ ಸಂದರ್ಭದಲ್ಲಿ ಹೇಳಿದರು.