ಪಡುಬಿದ್ರಿ: ಮೊಕ್ತೇಸರರಿಬ್ಬರಿಂದ ದೇವಳದಲ್ಲೇ ಹೊಡೆದಾಟ; ದೂರು-ಪ್ರತಿದೂರು ದಾಖಲು

ಪಡುಬಿದ್ರಿ, ಫೆ.25: ಶಿವರಾತ್ರಿ ಅಂಗವಾಗಿ ದೇವಸ್ಥಾನದಲ್ಲಿ ನಡೆದ ಭಜನಾ ಕಾರ್ಯಕ್ರಮದ ದೀಪ ಪ್ರಜ್ವಲನ ಸಂದರ್ಭ ಆನುವಂಶಿಕ ಮೊಕ್ತೇಸರರಿಬ್ಬರು ದೇವಳದಲ್ಲಿಯೇ ಹೊಡೆದಾಡಿಗೊಂಡ ಘಟನೆ ಶುಕ್ರವಾರ ಸಂಜೆ ಪಡುಬಿದ್ರಿಯ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ನಡೆದಿದೆ.
ಆನುವಂಶಿಕ ಮೊಕ್ತೇಸರರಾದ ಪಿ.ವಿ. ಹೆಗ್ಡೆ ಹಾಗೂ ಪಡುಬಿದ್ರಿ ಬೀಡು ರತ್ನಾಕರ ರಾಜ್ ಅರಸ್ ಅವರ ನಡುವೆ ಹೊಡೆದಾಟ ನಡೆದಿದ್ದೂ, ಇಬ್ಬರೂ ಪಡುಬಿದ್ರಿ ಪೊಲೀಸ್ ಠಾಣೆಗೆ ದೂರು-ಪ್ರತಿದೂರು ನೀಡಿದ್ದಾರೆ.
ದೀಪ ಹಚ್ಚುವ ಸಮಯದಲ್ಲಿ ನಾನು ಹಿರಿಯವನಾಗಿದ್ದು, ನಾನು ಮೊದಲು ದೀಪ ಹಚ್ಚಬೇಕು ಎಂದು ಪಿ.ವಿ.ಹೆಗ್ಡೆ ಅವರು ರತ್ನಾಕರರಾಜ್ ಕೈಯಿಂದ ಆರತಿಯನ್ನು ಹಿಡಿದೆಳೆದಿದ್ದರು. ಇದರಿಂದ ಕೋಪಗೊಂಡ ರತ್ನಾಕರರಾಜ್ ಪಿ.ವಿ.ಹೆಗ್ಡೆ ಅವರಿಗೆ ಕಪಾಳಮೋಕ್ಷ ಮಾಡಿದ್ದಾರೆ. ಇದರಿಂದ ಕೋಪಗೊಂಡ ಹೆಗ್ಡೆ, ರತ್ನಾಕರರಾಜ್‌ರಿಗೆ ಹೊಡೆದಿದ್ದಾರೆ ಎಂದು ತಿಳಿದುಬಂದಿದೆ.
ಧಾರ್ಮಿಕ ದತ್ತಿ ಇಲಾಖೆಗೊಳಪಟ್ಟ ಈ ದೇವಸ್ಥಾನದಲ್ಲಿ ಈಗ ಆಡಳಿತಾಧಿಕಾರಿ ಕಾರ್ಯನಿರ್ವಹಿಸುತ್ತಿದ್ದಾರೆ. ಆನುವಂಶಿಕ ಮೊಕ್ತೇಸರಿಕೆಗಾಗಿ ಇವರಿಬ್ಬರ ನಡುವೆ ಹಲವು ಸಮಯದಿಂದ ಮೇಲಾಟ ನಡೆಯುತ್ತಿದ್ದು, ನ್ಯಾಯಾಲಯದ ಮೆಟ್ಟಿಲನ್ನೇರಿದ್ದರು.
ಇತ್ತೀಚೆಗಷ್ಟೇ ಧಾರ್ಮಿಕ ದತ್ತಿ ಇಲಾಖೆ ರತ್ನಾಕರರಾಜ್ ಅವರನ್ನು ಮೊಕ್ತೇಸರರನ್ನಾಗಿ ನೇಮಿಸಿ ಆದೇಶ ಹೊರಡಿಸಿತ್ತು.





