ಬಲವಂತದ ಬಂದ್ ವಿರುದ್ಧ ದೂರು ನೀಡಿ: ಡಿಸಿಪಿ ಶಾಂತರಾಜು
ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಎಸ್ಸಿ-ಎಸ್ಟಿ ಸಭೆ

ಮಂಗಳೂರು, ಫೆ.26: ಬಂದ್ ಸಂದರ್ಭ ಅಂಗಡಿ ಮುಂಗಟ್ಟುಗಳನ್ನು ಬಲವಂತವಾಗಿ ಬಂದ್ ಮಾಡಿದರೆ ದೂರು ನೀಡಿ. ತಕ್ಷಣ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳುತ್ತದೆ ಎಂದು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಶಾಂತಾರಾಜು ಹೇಳಿದರು.
ರವಿವಾರ ನಗರ ಪೊಲೀಸ್ ಆಯುಕ್ತಾಲಯ ವ್ಯಾಪ್ತಿಯ ಮಾಸಿಕ ಎಸ್ಸಿ-ಎಸ್ಟಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ದಲಿತರ ವಿವಿಧ ಅಹವಾಲುಗಳನ್ನು ಆಲಿಸಿ ಸಮಸ್ಯೆಗೆ ಪರಿಹಾರ ಸೂಚಿಸಿದರು.
ಬಂದ್ ಸಂದರ್ಭ ಕೆಲವರು ಬಲವಂತವಾಗಿ ಬಂದ್ ಮಾಡುವ ಮೂಲಕ ಸಾರ್ವಜನಿಕರಿಗೆ ತೊಂದರೆ ನೀಡಲಾಗುತ್ತಿದೆ. ಈ ಕುರಿತು ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಚಿನ್ನಪ್ಪಬಂಗೇರಾ ಮನವಿ ಮಾಡಿದರು.
ಬಸ್‌ನಲ್ಲಿ ಪ್ರಯಾಣಿಸುವಾಗ ಕರ್ಕಶ ಹಾರ್ನ್ ಹಾಗೂ ಸ್ಪೀಕರ್ ಹಾವಳಿ ಇದೆ ಎಂಬ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಡಿಸಿಸಿ ಶಾಂತರಾಜು ಬಸ್‌ಗಳಲ್ಲಿ ಕರ್ಕಶ ಹಾರ್ನ್ ಹಾಕಿ, ಸ್ಪೀಕರ್‌ಗಳನ್ನು ಅಳವಡಿಸಿ ಪ್ರಯಾಣಿಕರಿಗೆ ಸಮಸ್ಯೆ ಸೃಷ್ಟಿ ಮಾಡುವವರ ವಿರುದ್ಧ ಪ್ರಯಾಣಿಕರು ದೂರು ನೀಡಿದರೆ ತಕ್ಷಣ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.
ಯಾವ ರೂಟ್‌ನ, ಯಾವ ಸಂಖ್ಯೆಯ ಬಸ್, ಯಾವ ಕಡೆಯಿಂದ ಯಾವ ಕಡೆಗೆ ಹೋಗುತ್ತಿದೆ ಇತ್ಯಾದಿ ಮಾಹಿತಿಯನ್ನು ಪೊಲೀಸ್ ಇಲಾಖೆಗೆ ತಿಳಿಸಿದರೆ ತಕ್ಷಣ ಟ್ರಾಫಿಕ್ ಪೊಲೀಸರ ಮೂಲಕ ಕ್ರಮ ಕೈಗೊಳ್ಳಲಾಗುತ್ತದೆ. ದೂರುದಾರರು ತಮ್ಮ ಹೆಸರನ್ನು ಹೇಳಬೇಕಾಗಿಲ್ಲ ಎಂದು ಡಿಸಿಪಿ ಸ್ಪಷ್ಟಪಡಿಸಿದರು.
ಮಂಗಳಾದೇವಿಯ ದೇವಸ್ಥಾನದ ಸಮೀಪ ಬಸ್‌ಬೇ ನಿರ್ಮಿಸಬೇಕು. ರೂಟ್ ನಂಬ್ರ 15,13, 3,4,6, 27ರ ಬಸ್‌ಗಳಿಗೆ ಪ್ರತ್ಯೇಕವಾದ ಬಸ್ ನಿಲ್ದಾಣವನ್ನು ದೇವಸ್ಥಾನದ ಬಳಿ ಮಾಡಬೇಕು. ಇದರಿಂದ ಸಾವಿರಾರು ಪ್ರಯಾಣಿಕರಿಗೆ ಅನುಕೂಲವಾಗುತ್ತದೆ ಎಂದು ವ್ಯಕ್ತಿಯೊಬ್ಬರು ಅಭಿಪ್ರಾಯಪಟ್ಟರು. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಜತೆ ಚರ್ಚಿಸಲಾಗುವುದು ಎಂದು ಡಿಸಿಪಿ ಭರವಸೆ ನೀಡಿದರು.
ವಾಮಂಜೂರಿನಲ್ಲಿ ಹಂಪ್ಸ್‌ಗಳ ಸಂಖ್ಯೆ ಹೆಚ್ಚಿವೆ. ಇದರಿಂದ ಈ ರಸ್ತೆ ಹಾದು ಹೋಗುವ ವಾಹನ ಚಾಲಕರಿಗೆ ಸಮಸ್ಯೆಯಾಗಿದೆ ಎಂದು ವ್ಯಕ್ತಿಯೊಬ್ಬರು ದೂರಿದರು.
ಇದು ರಾಷ್ಟ್ರೀಯ ಹೆದ್ದಾರಿಯಾದ ಕಾರಣ ಹೆದ್ದಾರಿ ಅಧಿಕಾರಿಗಳಿಗೆ ಮಾಹಿತಿ ನೀಡಬೇಕಾಗುತ್ತದೆ. ಆ ಅಧಿಕಾರಿಗಳು ಸುಪ್ರೀಂ ಕೋರ್ಟ್‌ನ ನಿಯಮವಳಿಗಳನ್ನು ನೋಡಿಕೊಂಡು ಕ್ರಮಕೈಗೊಳ್ಳುತ್ತಾರೆ ಎಂದು ಶಾಂತರಾಜು ಪ್ರತಿಕ್ರಿಯಿಸಿದರು.
ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಡಾ. ಸಂಜೀವ್ ಪಾಟೀಲ್ ಉಪಸ್ಥಿತರಿದ್ದರು. ಬಂದರು ಪೊಲೀಸ್ ಇನ್‌ಸ್ಪೆಕ್ಟರ್ ಶಾಂತಾರಾಮ ಸ್ವಾಗತಿಸಿದರು. ಪಣಂಬೂರು ಠಾಣೆಯ ಲೋಕೇಶ್ ವಂದಿಸಿದರು.







