ಶಿವಸೇನೆ ‘ನಮ್ಮ ನಿಜವಾದ ಹಿತೈಷಿ’: ಗೆದ್ದ ಮುಸ್ಲಿಮ್ ಅಭ್ಯರ್ಥಿಗಳ ಹೇಳಿಕೆ

ಮುಂಬೈ,ಫೆ.26: ಹಿಂದುತ್ವ ಸಿದ್ಧಾಂತದೊಂದಿಗೆ ಗುರುತಿಸಿಕೊಂಡಿರುವ ಶಿವಸೇನೆಯು ಮುಂಬೈನ ಎರಡು ಮುಸ್ಲಿ ಬಾಹುಳ್ಯದ ಪ್ರದೇಶಗಳಲ್ಲಿ ತನ್ನ ವಿಜಯ ಪತಾಕೆ ನೆಡುವಲ್ಲಿ ಯಶಸ್ವಿಯಾಗಿದೆ. ಈ ವಾರ್ಡ್‌ಗಳಲ್ಲಿ ಗೆಲುವು ಸಾಧಿಸಿರುವ ಪಕ್ಷದ ಅಭ್ಯರ್ಥಿಗಳು ಶಿವಸೇನೆ ತಮ್ಮ ನಿಜವಾದ ಹಿತೈಷಿಯಾಗಿದೆ ಎಂದು ಬಣ್ಣಿಸಿದ್ದಾರೆ.
ಬೃಹನ್ಮುಂಬೈ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಶಿವಸೇನೆ 84 ಸ್ಥಾನಗಳನ್ನು ಗೆಲ್ಲುವ ಮೂಲಕ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಅದು ಕಣಕ್ಕಿಳಿಸಿದ್ದ ಐವರು ಮುಸ್ಲಿಮ್ ಅಭ್ಯರ್ಥಿಗಳ ಪೈಕಿ ಹಾಜಿ ಮುಹಮ್ಮದ್ ಹಲೀಂ ಖಾನ್(35) ಅವರು ಬಾಂದ್ರಾ(ಪೂರ್ವ)ದ ಬೆಹ್ರಾಂಪಾಡಾ ವಾರ್ಡ್ ನಂ.96ರಿಂದ ಮತ್ತು ಶಾಹಿದಾ ಖಾನ್(52) ಅವರು ಆಂಬೋಲಿ ಮತ್ತು ಜೋಗೇಶ್ವರಿಯ ಭಾಗಗಳನ್ನೊಳಗೊಂಡ ವಾರ್ಡ್ ನಂ.64ರಿಂದ ಗೆಲುವು ಸಾಧಿಸಿದ್ದಾರೆ.
ಶಿವಸೇನೆಯು ಮುಸ್ಲಿಮ್ ವಿರೋಧಿ ಎನ್ನುವುದೆಲ್ಲ ಬೋಗಸ್ ಎಂದು ಹೇಳಿದ ಟ್ರಾವೆಲ್ ವ್ಯವಹಾರ ನಡೆಸುತ್ತಿರುವ ಖಾನ್, ಅದನ್ನು ಮುಸ್ಲಿಮ್ ವಿರೋಧಿ ಎಂದು ಬಿಂಬಿಸಿರುವುದರಲ್ಲಿ ಸಮಾಜದ ಕೆಲವು ವರ್ಗಗಳ ಕೈವಾಡವಿದೆ. ಬದಲಿಗೆ,ನಮ್ಮ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಶಿವಸೇನೆ ನಮಗೆ ಸದಾ ನೆರವು ನೀಡಿದೆ. ಅದು ನಮ್ಮ ನಿಜವಾದ ಹಿತೈಷಿಯಾಗಿದೆ ಎಂದು ಹೊಗಳಿದರು.
ನಮ್ಮ ಪ್ರತಿಷ್ಠಿತ ಮಸೀದಿಗಳಲ್ಲೊಂದು ದಿ.ಬಾಳಾಸಾಹೇಬ್ ಠಾಕ್ರೆಯವರು ನೆರವು ನೀಡಿದಾಗಲಷ್ಟೇ ತಲೆ ಎತ್ತಿದ್ದು ನನಗೆ ಇನ್ನೂ ನೆನಪಿದೆ ಎಂದರು.
ಬೆಹ್ರಾಂಪಾಡಾ ಈವರೆಗೆ ಕಾಂಗ್ರೆಸಿನ ಭದ್ರಕೋಟೆಯಾಗಿತ್ತು.
ಕಾಂಗ್ರೆಸ್ ಮುಸ್ಲಿಮ್ ಸಮುದಾಯವನ್ನು ತನ್ನ ವೋಟ್‌ಬ್ಯಾಂಕ್ ಎಂದಷ್ಟೇ ಪರಿಗಣಿಸಿದೆ ಎಂದು ಅವರು ಆಪಾದಿಸಿದರು.
ಹಿಂದುತ್ವ ನಮ್ಮ ತಲೆಯ ಮೇಲಿನ ನೆರಳು ಎನ್ನುವುದನ್ನು ಯಾರೂ ನಿರಾಕರಿಸಲಾಗದು. ನಾವು ಅದರ ಕೆಳಗೇ ಬದುಕುವ ಅಗತ್ಯವಿದೆ. ನಮ್ಮ ಪಕ್ಷದ ಮುಖ್ಯಸ್ಥರು ಹಾಗೆ ಹೇಳಿದರೆ ಅದರಲ್ಲಿ ತಪ್ಪೇನೂ ಇಲ್ಲ. ಎಲ್ಲಕ್ಕೂ ಮುಖ್ಯವೆಂದರೆ ಪ್ರಾಮಾಣಿಕವಾದ ಸಮಸ್ಯೆಗಳೊಂದಿಗೆ ತನ್ನನ್ನು ಸಂಪರ್ಕಿಸಿದ ನಮ್ಮ ಸಮುದಾಯದವರಿಗೆ ಶಿವಸೇನೆ ಸದಾ ನೆರವು ನೀಡಿದೆ ಎಂದು ಶಾಹಿದಾ ಹೇಳಿದರು.
ಈವರೆಗೆ ಮನೆವಾರ್ತೆಗೆ ಮಾತ್ರ ಸೀಮಿತರಾಗಿದ್ದ ಶಾಹಿದಾ ಕಳೆದ 16 ವರ್ಷಗಳಿಂದಲೂ ಸ್ಥಳೀಯ ಶಿವಸೇನಾ ಶಾಖಾ ಪ್ರಮುಖ್ ಆಗಿರುವ ತನ್ನ ಪತಿ ಹರೂನ್ ಖಾನ್ ಅವರ ನೆರವಿನೊಂದಿಗೆ ತನ್ನ ಪ್ರದೇಶದಲ್ಲಿಯ ಸಮಸ್ಯೆಗಳನ್ನು ಬಗೆಹರಿಸುವ ವಿಶ್ವಾಸ ಹೊಂದಿದ್ದಾರೆ.
ಮುಸ್ಲಿಮ್ರನ್ನು ತಲುಪುವ ಶಿವಸೇನೆಯ ಪ್ರಯತ್ನ ರಾತ್ರೋರಾತ್ರಿ ತೆಗೆದುಕೊಂಡ ನಿಲುವಲ್ಲ. ಅದು ಸೂಕ್ತ ಚರ್ಚೆಗಳ ಬಳಿಕ ತೆಗೆದುಕೊಂಡ ನಿರ್ಧಾರವಾಗಿದ್ದು,ಧನಾತ್ಮಕ ಫಲಿತಾಂಶಗಳನ್ನು ನೀಡಿದೆ ಎನ್ನುವುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯವಾಗಿದೆ.