ಬೆಳ್ತಂಗಡಿ: ದಲಿತ ಶಾಲಾ ಬಾಲಕನಿಗೆ ಮದ್ಯ ಕುಡಿಸಿದ ಅಕ್ರಮ ಮದ್ಯ ಮಾರಾಟಗಾರರು
ಪ್ರಕರಣ ದಾಖಲಿಸಲು ಪೋಲೀಸರ ವಿಳಂಬ; ದಲಿತ ಮುಖಂಡರ ಆಕ್ರೋಶ

ಬೆಳ್ತಂಗಡಿ, ಫೆ.26: ಧರ್ಮಸ್ಥಳ ಪೊಲೀಸ್ ಠಾಣಾವ್ಯಾಪ್ತಿಯ ನಿಡ್ಲೆಯಲ್ಲಿ ದಲಿತ ಸಮುದಾಯದ 6ನೆ ತರಗತಿಯ ಶಾಲಾ ಬಾಲಕನಿಗೆ ಅಕ್ರಮ ಮದ್ಯ ಮಾರಾಟಗಾರರು ಕಳ್ಳಬಟ್ಟಿ ಸಾರಾಯಿ ಕುಡಿಸಿದ್ದು, ತೀವ್ರವಾಗಿ ಅಸ್ವಸ್ಥನಾಗಿ ರಸ್ತೆಬದಿಯಲ್ಲಿ ಬಿದ್ದಿದ್ದ ಬಾಲಕನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಬಗ್ಗೆ ಧರ್ಮಸ್ಥಳ ಠಾಣೆಗೆ ದೂರು ನೀಡಿದ್ದರೂ ಪೊಲೀಸರು ಕೇಸು ದಾಖಲಿಸದೆ ಪ್ರಕರಣ ಮುಚ್ಚಿಹಾಕಲು ಮುಂದಾಗುತ್ತಿದ್ದಾರೆ. ಕೆಲವರು ಪ್ರಕರಣವನ್ನು ರಾಜಿಯಲ್ಲಿ ಮುಗಿಸುವ ಬಗ್ಗೆ ಒತ್ತಡ ಹೇರುತ್ತಿದ್ದಾರೆ. ಈ ಬಗ್ಗೆ ಕೂಡಲೇ ಸೂಕ್ತವಾದ ಕ್ರಮ ಕೈಗೊಳ್ಳಬೇಕು ಎಂದು ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ನಡೆದ ದಲಿತರ ಕುಂದುಕೊರತೆ ಸಭೆಯಲ್ಲಿ ಒತ್ತಾಯಿಸಲಾಯಿತು.
ಅಕ್ರಮ ಮದ್ಯ ಮಾರಾಟಗಾರರ ಉಪಟಳ ಮಿತಿ ಮೀರುತ್ತಿರುವ ಬಗ್ಗೆ ಶ್ರೀಧರ ಕಳೆಂಜ ಅವರು ಗಮನ ಸೆಳೆದು ಪ್ರಕರಣದ ಮಾಹಿತಿ ನೀಡಿದರು.
ಈ ಬಗ್ಗೆ ಚಂದು ಎಲ್, ಶೇಖರ ಲಾಯಿಲ ಹಾಗೂ ಇತರರು ದ್ವನಿಗೂಡಿಸಿ ಕೂಡಲೇ ಅಕ್ರಮ ಸರಾಯಿ ಮಾರಾಟಗಾರರ ವಿರುದ್ದ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಈ ಬಗ್ಗೆ ನಾಳೆಯೇ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಭರವಸೆ ನೀಡಿದರು.
ವಿದ್ಯಾರ್ಥಿನಿಯೋರ್ವಳ ಮೇಲೆ ಏರ್‌ಗನ್‌ನಿಂದ ಗುಂಡು:
ಬೆಳಾಲು ಗ್ರಾಮದ ಕೋಲ್ಪಾಡಿ ಎಂಬಲ್ಲಿ ದಲಿತ ಕುಟುಂಬವೊಂದರ ಮೇಲೆ ನಿರಂತರ ದೌರ್ಜನ್ಯ ಮಾಡಲಾಗುತ್ತಿದೆ. ವಿದ್ಯಾರ್ಥಿನಿಯೋರ್ವಳ ಮೇಲೆ ಏರ್‌ಗನ್‌ನಿಂದ ಗುಂಡು ಹಾರಿಸಲಾಗಿದೆ. ಆದರೆ ಈ ಬಗ್ಗೆ ದೂರು ನೀಡಿದರೆ ಧರ್ಮಸ್ಥಳ ಠಾಣೆಯಲ್ಲಿ ಸರಿಯಾದ ಸ್ಪಂದನ ಸಿಗುತ್ತಿಲ್ಲ. ಆರೋಪಿಗಳ ಪರವಾಗಿ ಪೋಲೀಸರು ಮಾತನಾಡುತ್ತಿದ್ದಾರೆ. ದೌರ್ಜನ್ಯಕ್ಕೆ ಒಳಗಾದ ಮನೆಯ ಮಕ್ಕಳು ಶಾಲೆಗೆ ಹೋಗಲೂ ಭಯ ಪಡುತ್ತಿದ್ದಾರೆ ಎಂದು ಬಿ.ಕೆ ವಸಂತ ಹಾಗೂ ಚಂದು ಎಲ್, ವೆಂಕಣ್ಣ ಕೊಯ್ಯೂರು ಗಮನಸೆಳೆದರು.
ಈ ಬಗ್ಗೆ ಸಂಕಷ್ಟಕ್ಕೆ ಒಳಗಾದ ವಿದ್ಯಾರ್ಥಿನಿ ವೇದಾವತಿ ಮಾಹಿತಿ ನೀಡಿದರು.
ಈ ಬಗ್ಗೆ ಕೂಡಲೇ ಕೈಗೊಳ್ಳುವುದಾಗಿ ಪೊಲೀಸ್ ವರಿಷ್ಠಾಧಿಕಾರಿಯವರು ತಿಳಿಸಿದರು. ಈ ಎರಡು ಪ್ರಕರಣಗಳಲ್ಲಿ ಧರ್ಮಸ್ಥಳ ಠಾಣಾಧಿಕಾರಿಯವರಿಂದ ವಿವರಣೆ ಕೇಳುವುದಾಗಿ ಪೋಲಿಸ್ ವರಿಷ್ಠಾಧಿಕಾರಿಯವರು ಭರವಸೆ ನೀಡಿದರು.
ಲಾಯಿಲ ಗ್ರಾಮ ಪಂಚಾಯತ್ ಬೆಂಕಿ ಪ್ರಕರಣ ತನಿಖೆಗೆ ಒತ್ತಾಯ:
ಲಾಯಿಲ ಗ್ರಾಮ ಪಂಚಾಯತ್ ನಲ್ಲಿ ಲೆಕ್ಕ ಪರಿಶೋಧನೆಯ ಹಿಂದಿನ ದಿನ ಬೆಂಕಿ ಕಾಣಿಸಿಕೊಂಡು ಕಡತಗಳು ಸುಟ್ಟು ಹೋಗಿರುವ ಬಗ್ಗೆ ಪ್ರಸ್ತಾಪಿಸಿದ ನಾಗರಾಜ ಲಾಯಿಲ,ಗ್ರಾಮ ಪಂಚಾಯತ್ ಗೆ ವ್ಯವಸ್ಥಿತವಾಗಿ ಬೆಂಕಿ ಹಾಕಲಾಗಿದೆ. ಮೆಸ್ಕಾಂ ಇಲಾಖೆಯವರು ಶಾರ್ಟ್‌ಸರ್ಕ್ಯೂಟ್‌ನಿಂದಾಗಿ ಬೆಂಕಿ ಹಿಡಿದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಬಿಎಸ್ಸೆನ್ನೆಲ್ ನವರೂ ತಮ್ಮ ವ್ಯವಸ್ತೆಯಲ್ಲಿ ಯಾವುದೇ ನೂನ್ಯತೆಯಿರುವುದು ಕಂಡು ಬರುವುದಿಲ್ಲ ಹಾಗೂ ಬೆಂಕಿಗೆ ಕಾರಣವಾಗಿರುವುದಿಲ್ಲ ಎಂದು ತಿಳಿಸಿದೆ. ಹೀಗಿರುವಾಗ ಬೆಂಕಿ ಹಚ್ಚಿಕೊಂಡಿರುವುದು ಹೇಗೆ ಎಂಬ ವಿಚಾರ ತನಿಖೆಯಿಂದ ಮಾತ್ರ ತಿಳಿಯಬೇಕಾಗಿದೆ ಘಟನೆ ನಡೆದು ತಿಂಗಳುಗಳೇ ಕಳೆದಿದ್ದರೂ ಈ ಬಗ್ಗೆ ನಡಯುತ್ತಿರುವ ತನಿಖೆ ಯಾವ ಹಂತದಲ್ಲಿದೆ ಎಂದು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಪೊಲೀಸ್ ವರಿಷ್ಠಾಧಿಕಾರಿಯವರು ತನಿಖೆ ನಡೆಸಿ ವರದಿ ನೀಡುವಂತೆ ಡಿವೈಎಸ್‌ಪಿ ರವೀಶ್ ಅವರಿಗೆ ಸೂಚಿಸಿದರು.
ಡಿಸಿ ಮನ್ನಾ ಜಮೀನು ಅಕ್ರಮ:
ತಾಲೂಕಿನಲ್ಲಿರುವ ಡಿಸಿ ಮನ್ನಾ ಜಮೀನು ಅಕ್ರಮದ ಬಗ್ಗೆ ಶೇಖರ ಲಾಯಿಲ ಗಮನ ಸೆಳೆದರು. ತಾಲೂಕಿನಲ್ಲಿ ಸಾಕಷ್ಟು ಡಿಸಿ ಮನ್ನಾ ಜಮೀನನ್ನು ಇತರೆ ಉದ್ದೇಶಗಳಿಗೆ ಉಪಯೋಗಿಸಲಾಗಿದೆ ಆದರೆ ಅದಕ್ಕೆ ಬದಲಿ ಜಮೀನನ್ನು ಪಡೆಯಲಾಗಿದೆಯೇ ಎಂದು ಅವರು ಪ್ರಶ್ನಿಸಿದರು. ಅಕ್ರಮವಾಗಿರುವ ಜಮೀನನ್ನು ಮರಳಿ ಪಡೆಯಲು ಯಾಕೆ ಕ್ರಮ ಕೈಗೊಲ್ಳಲಾಗುತ್ತಿಲ್ಲ ಎಂದು ಪ್ರಶ್ನಿಸಿದರು.
ಈ ಬಗ್ಗೆ ಅಕ್ರಮಣಕಾರರ ವಿರುದ್ದ ಕೂಡಲೇ ಪೊಲೀಸರಿಗೆ ದೂರುನೀಡಿ ಪ್ರಕರಣ ದಾಖಲಿಸುವಂತೆ ಅವರು ಒತ್ತಾಯಿಸಿದರು. ಈಬಗ್ಗೆ ಕ್ರಮ ಕೈಗೊಳ್ಳುವಂತೆ ಎಲ್ಲರೂ ಒಕ್ಕೊರಲಿನಿಂದ ಆಗ್ರಹಿಸಿದರು. ಸುಮಾರು ಎರಡು ಸಾವಿರ ಎಕ್ರ ಡಿಸಿಮನ್ನಾ ಜಮೀನಿದ್ದು ಇದನ್ನು ವಶಪಡಿಸಿ ಭೂರಹಿತ ದಲಿತ ಕುಟುಂಬಗಳಿಗೆ ಹಂಚಬೇಕು ಎಂದು ಒತ್ತಾಯಿಸಲಾಯಿತು.
ಸಭೆಯಲ್ಲಿ ಡಿವೈಎಸ್ಪಿ ರವೀಶ್ ಸಿ ಆರ್, ಬೆಳ್ತಂಗಡಿ ವೃತ್ತನಿರೀಕ್ಷಕ ನಾಗೇಶ್ ಕದ್ರಿ, ಸಮಾಜಕಲ್ಯಾಣಾಧಿಕಾರಿ ಮೋಹನ್, ತಾ.ಪಂ ಕಾರ್ಯನಿರ್ವಹಣಾಧಿಕಾರಿ ಸಿ.ಆರ್ ನರೇಂದ್ರ ಹಾಗೂ ಇತರೆ ಅಧಿಕಾರಿಗಳು, ದಲಿತ ದೌರ್ಜನ್ಯಸಮಿತಿ ಸದಸ್ಯ ಸಂಜೀವ ನೆರಿಯ ಉಪಸ್ಥಿತರಿದ್ದರು.
ಜಿಲ್ಲೆಯಲ್ಲಿ ಮುಂದಿನ ತಿಂಗಳಿನಿಂದ ಪೊಲೀಸ್ ವ್ಯವಸ್ತೆಯಲ್ಲಿ ಹೊಸ ಬದಲಾವಣೆಯನ್ನು ತರಲಾಗುತ್ತಿದ್ದು, ಒಂದು ಗ್ರಾಮದ ಜವಾಬ್ದಾರಿಯನ್ನು ಒರ್ವ ಪೋಲೀಸ್ ಪೇದೆಗೆ ನೀಡುವ ಮೂಲಕ ಜನಸ್ನೇಹಿಯಾದ ಪೋಲೀಸ್ ವ್ಯವಸ್ತೆ ಜಾರಿಗೆ ತರುವಪ್ರಯತ್ನ ನಡೆಸಲಾಗುವುದು.
ಇದನ್ನು ಪ್ರಾಯೋಗಿಕವಾಗಿ ಬೆಳ್ತಂಗಡಿ, ಬಂಟ್ವಾಳ, ಪುತ್ತೂರು ಹಾಗೂ ಸುಳ್ಯ ಠಾಣೆಗಳಲ್ಲಿ ಜಾರಿಗೆ ತರಲಾಗುತ್ತಿದೆ, ಬೆಳ್ತಂಗಡಿಗೆ ಸಂಚಾರಿ ಪೊಲೀಸ್ ಠಾಣೆ ಮಂಜೂರಾಗಿದ್ದು ಅದರ ವ್ಯಪ್ತಿಯಬಗ್ಗೆ ಇನ್ನಷ್ಟೇ ಸ್ಪಷ್ಟನೆ ಬರಲಿದ್ದು ಎಲ್ಲಿ ಠಾಣೆಯನ್ನು ಆರಂಭಿಸಬೇಕು ಎಂಬ ಬಗ್ಗೆ ನಿರ್ಧಾರ ತೆಗೆದುಕೊಂಡು ಬಳಿಕ ಮಾರ್ಚ್ ಅಂತ್ಯದೊಳಗೆ ಠಾಣೆ ಆರಂಭಗೊಳ್ಳಲಿದೆ.
- ಗುಲಾಬ್ ಬೋರಸೆ, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ.







