ಟ್ರಂಪ್ ಭೀತಿ: ನೌಕಾಪಡೆಯನ್ನು ಬಲಪಡಿಸಲು ಮುಂದಾಗಿರುವ ಚೀನಾ

ಬೀಜಿಂಗ್, ಫೆ. 26: ಆಳ ಸಮುದ್ರಗಳಲ್ಲಿ ಅಮೆರಿಕದ ಏಕಸ್ವಾಮ್ಯವನ್ನು ಕೊನೆಗೊಳಿಸಲು ಮುಂದಾಗಿರುವ ಚೀನಾ, ಈ ಕ್ಷೇತ್ರದಲ್ಲಿ ತನ್ನ ಸಾಮರ್ಥ್ಯವನ್ನು ಹೆಚ್ಚಿಸಲು ನಿರ್ಧರಿಸಿದೆ. ಅದಕ್ಕಾಗಿ, ಚೀನಾದ ನೌಕಾ ಪಡೆಯು ಮುಂದಿನ ರಕ್ಷಣಾ ಬಜೆಟ್‌ನಲ್ಲಿ ಹೆಚ್ಚಿನ ಅನುದಾನವನ್ನು ಪಡೆಯಲಿದೆ.
ಇತ್ತೀಚಿನ ತಿಂಗಳುಗಳಲ್ಲಿ ಚೀನಾದ ನೌಕಾ ಪಡೆಯು ಹೆಚ್ಚಿನ ಪಾತ್ರವನ್ನು ನಿಭಾಯಿಸುತ್ತಿದೆ. ಚೀನಾದ ಪ್ರಥಮ ವಿಮಾನವಾಹಕ ನೌಕೆ ‘ಅಡ್ಮಿರಲ್’ ಸ್ವ-ಆಡಳಿತದ ತೈವಾನ್‌ನ ಸುತ್ತ ಪ್ರದಕ್ಷಿಣೆ ಬಂದಿದೆ ಹಾಗೂ ಅದರ ಇತರ ಯುದ್ಧ ನೌಕೆಗಳು ದೂರದ ಪ್ರದೇಶಗಳಲ್ಲಿ ತಲೆಯೆತ್ತಿವೆ.
ಈಗ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊಸದಾಗಿ ನೌಕೆಗಳನ್ನು ನಿರ್ಮಿಸುವ ಯೋಜನೆಗಳನ್ನು ಕೈಗೆತ್ತಿಕೊಳ್ಳುವುದಾಗಿ ಹೇಳಿದ್ದಾರೆ. ಮೊದಲೇ ಅನಿಶ್ಚಿತ ವರ್ತನೆಗಳಿಗೆ ಹೆಸರಾಗಿರುವ ಟ್ರಂಪ್‌ರ ಈ ಕ್ರಮದಿಂದ ಎದೆಗುಂದಿರುವ ಚೀನಾ, ಅಮೆರಿಕದ ನೌಕಾಪಡೆಗೆ ಹೋಲಿಸಿದರೆ ತನ್ನ ಪಡೆಯಲ್ಲಿರುವ ಕೊರತೆಯನ್ನು ನೀಗಿಸಲು ಮುಂದಾಗಿದೆ.
‘‘ಇದು ಬಿಕ್ಕಟ್ಟಿನಲ್ಲಿ ಸಿಕ್ಕಿದ ಅವಕಾಶ ಎಂಬಂತಾಗಿದೆ’’ ಎಂದು ಬೀಜಿಂಗ್‌ನಲ್ಲಿರುವ ಏಶ್ಯದ ರಾಜತಾಂತ್ರಿಕರೊಬ್ಬರು ಚೀನಾದ ಇತ್ತೀಚಿನ ನೌಕಾ ಕಾರ್ಯಾಚರಣೆಗಳ ಬಗ್ಗೆ ಹೇಳುತ್ತಾರೆ.
‘‘ಟ್ರಂಪ್‌ರ ಚಂಚಲ ಮನಸ್ಸನ್ನು ಊಹಿಸುವುದು ಕಷ್ಟವಾಗಿರುವುದರಿಂದ ಅವರು ಯಾವುದೇ ಕ್ಷಣದಲ್ಲಿ ತನ್ನ ವಿರುದ್ಧ ದಾಳಿ ನಡೆಸಬಹುದಾಗಿದೆ ಎಂಬುದಾಗಿ ಚೀನಾ ಭಾವಿಸಿದೆ, ಹಾಗಾಗಿ, ಅದಕ್ಕಾಗಿ ಸಿದ್ಧಗೊಳ್ಳುತ್ತಿದೆ’’ ಎಂದರು.







