ಉರಿ ದಾಳಿಕೋರರಿಗೆ ನೆರವಾಗಿದ್ದ ಆರೋಪ ಹೊತ್ತ ಪಾಕ್ ಬಾಲಕರಿಗೆ ಎನ್‌ಐಎ ಕ್ಲೀನ್ ಚಿಟ್ ಸಾಧ್ಯತೆ

ಹೊಸದಿಲ್ಲಿ,ಫೆ.26: ಉರಿ ಸೇನಾ ಶಿಬಿರದ ಮೇಲೆ ದಾಳಿ ನಡೆಸಿದ್ದ ಗಡಿಯಾಚೆಯ ಭಯೋತ್ಪಾದಕರಿಗೆ ಮಾರ್ಗದರ್ಶಕರಾಗಿದ್ದ ಆರೋಪದಲ್ಲಿ ಬಂಧಿತ ಇಬ್ಬರು ಪಾಕಿಸ್ತಾನಿ ಬಾಲಕರಿಗೆ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ)ಯು ಕ್ಲೀನ್ ಚಿಟ್ ನೀಡುವ ಸಾಧ್ಯತೆಯಿದೆ. ಈ ಬಾಲಕರು ಅಲೆದಾಡುತ್ತ ಭಾರತದ ಗಡಿಯೊಳಗೆ ಪ್ರವೇಶಿಸಿದ್ದರು ಎನ್ನುವುದನ್ನು ಎನ್‌ಐಎ ಖಚಿತ ಪಡಿಸಿಕೊಂಡಿದೆ.
ಆದರೆ ಅದು ಈವರೆಗೂ ನ್ಯಾಯಾಲಯದಲ್ಲಿ ಪ್ರಕರಣದ ಮುಕ್ತಾಯ ವರದಿಯನ್ನು ಸಲ್ಲಿಸಿಲ್ಲ. ಹೀಗಾಗಿ ಈ ವರದಿ ನ್ಯಾಯಾಲಯದಲ್ಲಿ ಸಲ್ಲಿಕೆಯಾಗಿ, ಅಲ್ಲಿ ಅದು ಅಂಗೀಕೃತವಾದ ಬಳಿಕವಷ್ಟೇ ಬಂಧಿತರಾದ ಫೈಸಲ್ ಹುಸೇನ್ ಅವಾನ್ ಮತ್ತು ಆತನ ಶಾಲಾ ಸಹಪಾಠಿ ಅಹ್ಸಾನ್ ಖುರ್ಷಿದ್ ವಿಧ್ಯುಕ್ತವಾಗಿ ನೆಮ್ಮದಿಯ ನಿಟ್ಟುಸಿರೆಳೆಯಬಹುದಾಗಿದೆ.ನ್ಯಾಯಾಲಯ ಒಪ್ಪಿಕೊಂಡ ಬಳಿಕ ಅವರನ್ನು ಪಾಕಿಸ್ತಾನಕ್ಕೆ ವಾಪಸ್ ಕಳುಹಿಸುವ ಪ್ರಕ್ರಿಯೆ ಆರಂಭಗೊಳ್ಳಲಿದೆ.
19 ಯೋಧರು ಹುತಾತ್ಮರಾದ ಉರಿ ದಾಳಿ ನಡೆದ ಮೂರು ದಿನಗಳ ಬಳಿಕ, 2016 ಸೆ.21ರಂದು ಪ್ರದೇಶದಲ್ಲಿ ಶಂಕಾಸ್ಪದವಾಗಿ ಓಡಾಡುತ್ತಿದ್ದ ಈ ಬಾಲಕರನ್ನು ಕಂಡ ಗ್ರಾಮಸ್ಥರು ಅವರನು ಹಿಡಿದು ಥಳಿಸಿದ ಬಳಿಕ ಬಿಎಸ್‌ಎಫ್ ಮತ್ತು ಸೇನೆಯ ವಶಕ್ಕೆ ಒಪ್ಪಿಸಿದ್ದರು.





