ಹೇಳಿಕೆಯನ್ನು ವಿವಾದ ಮಾಡುವವರು ಭಾವನೆಯನ್ನು ಅರ್ಥೈಸಿಕೊಳ್ಳಬೇಕು: ಯು.ಟಿ.ಖಾದರ್

ಮಂಗಳೂರು. ಫೆ.26: "ಅತಿಥಿ ದೇವೋ ಭವ" ಎಂಬ ಮಾತಿನಂತೆ ನೆರೆಯ ರಾಜ್ಯದ ಮುಖ್ಯಮಂತ್ರಿಗಳನ್ನು ಹಾರ್ದಿಕವಾಗಿ ಸ್ವಾಗತಿಸಿ ಮಂಗಳೂರಿನ ಹಿರಿಮೆ, ಗೌರವವನ್ನು ಉಳಿಸಬೇಕಾಗಿತ್ತು. ಅದರ ಬದಲು ಸಂವಿಧಾನಾತ್ಮಕವಾಗಿ ಆಯ್ಕೆಯಾದ ಕೇರಳದ ಮುಖ್ಯಮಂತ್ರಿಗಳ ವಿರುದ್ಧ ದಿಕ್ಕಾರ ಕೂಗುವುದು ಕೀಳುತನವಾಗುತ್ತದೆ. ಇದರಿಂದ ನೊಂದುಕೊಂಡ ಕಾರಣ "ವಿರೋಧಿಸುವವರಿಗೆ ಚಪ್ಪಲಿಯಿಂದ ಹೊಡೆಯಬೇಕು" ಎಂಬ ಭಾವನೆ ವ್ಯಕ್ತಪಡಿಸಿದ್ದು ಸಹಜವಾಗಿದೆ. ಇದರಲ್ಲಿ ಜಾತಿ ಅಥವಾ ಪಕ್ಷದ ನಿಂದನೆ ಮಾಡಿಲ್ಲ. ಈ ಬಗ್ಗೆ ವಿವಾದ ಮಾಡುವವರನ್ನು ಏನೂ ಮಾಡಲು ಸಾಧ್ಯವಿಲ್ಲ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ. ಖಾದರ್ ಸ್ಪಷ್ಟಪಡಿಸಿದ್ದಾರೆ.
ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾರತದ ಸಂವಿಧಾನದ ರಚನೆಗೆ ಅನುಗುಣವಾಗಿ, ಜನರಿಂದ ಆಯ್ಕೆಯಾದಂತಹ ನೆರೆಯ ರಾಜ್ಯದ ಮುಖ್ಯಮಂತ್ರಿಯೊಬ್ಬರು ಮಂಗಳೂರಿಗೆ ಬರುತ್ತಾರೆಂದರೆ ಅವರನ್ನು ಜಾತಿ, ಮತ, ಬೇಧ ಮರೆತು ಸತ್ಕಾರ ನೀಡಬೇಕಾದದ್ದು ಸಂಸ್ಕಾರವುಳ್ಳವರ ಗುಣವಾಗಿದೆ ಎಂದು ಸಚಿವ ಯು.ಟಿ. ಖಾದರ್ ಹೇಳಿದ್ದಾರೆ.
ನಮ್ಮ ದೇಶದ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ಪ್ರದಾನಮಂತ್ರಿಯವರನ್ನು ಭಾರತಕ್ಕೆ ರೆಡ್ ಕಾರ್ಪೆಟ್ ಹಾಸಿ ಸ್ವಾಗತಿಸಿ, ಅವರ ಜೊತೆ ನಮ್ಮ ದೇಶದ ಪ್ರದಾನ ಮಂತ್ರಿ ಚಹಾ ಸೇವಿಸುವುದನ್ನು ಮೂಕರಾಗಿ ನೋಡಿದವರು, ನಮ್ಮದೇ ದೇಶದ ಒಂದು ರಾಜ್ಯದ ಮುಖ್ಯಮಂತ್ರಿ ಮಂಗಳೂರಿಗೆ ಬರುವುದನ್ನು ತಡೆಯುವ ಹತಾಶ ಪ್ರಯತ್ನ ಮಾಡುವುದು ಹಾಸ್ಯಾಸ್ಪದವಾಗಿದೆ. ಜನರು ಬುದ್ಧಿವಂತರು, ಎಲ್ಲವನ್ನೂ ತಿಳಿದುಕೊಳ್ಳುತ್ತಾರೆ. ವಿರೋಧಿಗಳ ದಾಳಕ್ಕೆ ಬಲಿಯಾಗುವವರಲ್ಲ ಎಂದು ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.







