ಹುಳಿಯಾರು ಸಮೀಪ ಬರದಲೇಪಾಳ್ಯದಲ್ಲಿ ಕಂಡುಬಂದ ಚಿರತೆ

ಹುಳಿಯಾರು, ಫೆ.26: ಇಬ್ಬರನ್ನು ಗಾಯಗೊಳಿಸಿ ದಾಳಿಂಬೆ ತೋಟದಲ್ಲಿ ಅಡಗಿ ಕುಳಿತಿದ್ದ ಚಿರತೆಯನ್ನು ಅರಣ್ಯ ಇಲಾಖೆಯವರು ಕಾರ್ಯಾಚರಣೆ ನಡೆಸಿ ಕಡೆಗೂ ಸೆರೆಹಿಡಿದ ಘಟನೆ ಹುಳಿಯಾರು ಪೋಲಿಸ್ ಠಾಣಾ ವ್ಯಾಪ್ತಿಯ ಕೆಂಕೆರೆ ಮಜುರೆ ಬರದಲೇ ಪಾಳ್ಯದಲ್ಲಿ ರವಿವಾರ ಸಂಜೆ ನಡೆದಿದೆ.
ರವಿವಾರ ಮುಂಜಾನೆ 7:30ರ ಸಮಯದಲ್ಲಿ ಕೆಂಕೆರೆ ಸಮೀಪದ ದುರ್ಗದಸೀಮೆ ಪಾಳ್ಯದಲ್ಲಿ ದಾಳಿಂಬೆ ತೋಟಕ್ಕೆ ಹೋಗಿದ್ದ ವ್ಯಕ್ತಿಯ ಮೇಲೆ ದಾಳಿ ಮಾಡಿದ ಚಿರತೆ ನಂತರ 10:30ರ ಸಮಯದಲ್ಲಿ ಬರದಲೇಪಾಳ್ಯದಲ್ಲಿ ಟೊಮೆಟೊ ಗಿಡಕ್ಕೆ ನೀರು ಹಾಯಿಸಲು ಹೋಗಿದ್ದ ವ್ಯಕ್ತಿಯ ಮೇಲೆ ಎರಗಿ ಗಾಯಗೊಳಿಸಿ ನಂತರ ಅಲ್ಲೆಯಿದ್ದ ದಾಳಿಂಬೆ ತೋಟಕ್ಕೆ ಹೊಕ್ಕಿದೆ.
ಅಷ್ಟರಲ್ಲಾಗಲೇ ಚಿರತೆ ಸುದ್ದಿ ಎಲ್ಲಡೆ ಹಬ್ಬಿ ಅಪಾರ ಸಂಖ್ಯೆಯ ಜನ ಸೇರಿದ್ದರಿಂದ ಹಾಗೂ ಅರಣ್ಯ ಇಲಾಖೆಯವರು ಆಗಮಿಸಿ ಕಾರ್ಯಾಚರಣೆಗೆ ಇಳಿದಿದ್ದರಿಂದ ದಾಳಿಂಬೆ ತೋಟದಿಂದ ಹೊರಗೆ ಬರಲಾರದೆ ಗಾಬರಿಗೊಂಡು ಸಂಜೆಯವರೆಗೂ ಒಂದೇ ಸ್ಥಳದಲ್ಲಿ ಕುಳಿತಿದೆ.
ಚಿರತೆ ಹಿಡಿಯಲು ಬಲೆ ಹೆಣೆದ ಅರಣ್ಯ ಇಲಾಖೆ ಸಿಬ್ಬಂದಿ ತೋಟದ ಸುತ್ತಲೂ ಬಲೆ ಹಾಕಿ ಚಿರತೆಯನ್ನು ಸುರಕ್ಷಿತವಾಗಿ ಸೆರೆ ಹಿಡಿಯಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಂಡಿತ್ತು. ಮಧ್ಯಾಹ್ನ 2 ಗಂಟೆ ಸುಮಾರಿಗೆ ಹಾಸನದಿಂದ ಅರವಳಿಕೆ ತಜ್ಞರಾದ ಡಾ.ಮುರಳಿ ಆಗಮಿಸಿದ ನಂತರ ಕಾರ್ಯಚರಣೆಯನ್ನು ಆರಂಭಿಸಲಾಯಿತು.
ಚಿರತೆಯು ದಾಳಿಂಬೆ ಗಿಡದ ಸಂದಿಯಲ್ಲಿ ಮಲಗಿದ್ದರಿಂದ ಅದರ ಚಲನವಲನ ಗಮನಿಸಿ ಅರಿವಳಿಕೆ ಚುಚ್ಚುಮದ್ದು ನೀಡಲು ಸಾಕಷ್ಟು ಸಮಯ ತೆಗೆದುಕೊಂಡಿತು.ಸಾವಿರದಷ್ಟು ಸೇರಿದ್ದ ಜನ ನಿಯಂತ್ರಿಸುವುದರ ಜೊತೆಗೆ ಚುಚುಮದ್ದು ನೀಡಿದಾಗ ಚಿರತೆ ಜನರ ಮೇಲೆ ಎರಗಿದರೆ ಎಂಬ ಆತಂಕದಲ್ಲಿಯೇ ಕಾರ್ಯಚರಣೆ ನಡೆಯಿತು.
ಅಂತಿಮವಾಗಿ ಸಂಜೆ 6 ಗಂಟೆ ಸುಮಾರಿಗೆ ಚಿರತೆಗೆ ಚುಚ್ಚುಮದ್ದು ನೀಡಿ ನಿತ್ರಾಣಗೊಂಡ ನಂತರ ಬಲೆಯಲ್ಲಿ ಹಾಕಿ ಬೋನಿನಲ್ಲಿ ಬಂಧಿಸಲಾಯಿತು. ಸೆರೆಹಿಡಿದ ಚಿರತೆಯನ್ನು ಸದ್ಯ ಬುಕ್ಕಾಪಟ್ಟಣಕ್ಕೆಕರೆದೊಯ್ದು ನಂತರ ಬಂಡಿಪುರ ಅರಣ್ಯ ಪ್ರದೇಶಕ್ಕೆ ಬಿಡಲಾಗುವುದು ಎಂದು ಅರಣ್ಯ ಇಲಾಖೆಯವರು ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಬುಕ್ಕಾಪಟ್ಟಣ ವಲಯ ಅರಣ್ಯಾಧಿಕಾರಿ ಮಲ್ಲೀಕಾರ್ಜುನಯ್ಯ,ಉಪವಲಯ ಅರಣ್ಯಾಧಿಕಾರಿ ಬಸವರಾಜು,ಹುಳಿಯಾರು ಪಿಎಸೈ ಪ್ರವೀಣ್ ಕುಮಾರ್ ಸೇರಿದಂತೆ ಅರಣ್ಯ ಹಾಗೂ ಹುಳಿಯಾರು ಪೋಲಿಸ್ ಸಿಬ್ಬಂದಿವರ್ಗದವರು ಪಾಲ್ಗೊಂಡಿದ್ದರು.







