ಪಾಲಿಶ್ ಮಾಡುವ ನೆಪದಲ್ಲಿ ಚಿನ್ನಾಭರಣ ಕಳವು
ಕಾರವಾರ, ಫೆ.26: ಚಿನ್ನದ ಒಡವೆಗಳನ್ನು ಸ್ವಚ್ಛಗೊಳಿಸಿ ಕೊಡುವುದಾಗಿ ಹೇಳಿ ಸುಮಾರು 2.20 ಲಕ್ಷ ರೂ. ವೌಲ್ಯದ ಚಿನ್ನಾಭರಣ ಲಪಟಾಯಿಸಿರುವ ಘಟನೆ ನಗರದ ಕೆಇಬಿ ಕಚೇರಿ ಬಳಿ ರವಿವಾರ ನಡೆದಿದೆ.
ಕೆಇಬಿ ಕಚೇರಿ ಸಮೀಪದ ಶೀಲಾ ಶಾನಬಾಗ್ ಮತ್ತು ಸೀತಾಬಾಯಿ ಪ್ರಭು ಮನೆಗೆ ಆಗಮಿಸಿದ ಇಬ್ಬರು ಅಪರಿಚಿತರು ಚಿನ್ನಾಭರಣಗಳನ್ನು ಪಾಲಿಶ್ ಮಾಡಿಕೊಡುವುದಾಗಿ ಹೇಳಿ ತಾಯಿ ಮತ್ತು ಮಗಳ ಬಳಿಯಿದ್ದ 2.20 ಲಕ್ಷ ರೂ. ವೌಲ್ಯದ ನಾಲ್ಕು ಬಳೆಗಳು, ಎರಡು ಪಾಟ್ಲಿ, ಬಂಗಾರದ ಸರ ಸೇರಿದಂತೆ ಸುಮಾರು 110 ಗ್ರಾಂ ಚಿನ್ನಾಭರಗಳನ್ನು ಪಡೆದು ಅವರೆದುರೇ ಪಾಲಿಶ್ ಮಾಡಲು ಆರಂಭಿಸಿದ್ದಾರೆ. ಪಾಲೀಶ್ ಮುಗಿದಿರುವುದಾಗಿ ಹೇಳಿದ ಅಪರಿಚಿತರು, ಬಟ್ಟೆಯೊಂದರಲ್ಲಿ ಸುತ್ತಿ ಕುಕ್ಕರ್‌ನಲ್ಲಿ ಹಾಕಿ ಸ್ವಲ್ಪಬಿಸಿ ಮಾಡುವಂತೆ ಹೇಳಿದ್ದಾರೆ.
ಶೀಲಾ ಶಾನಭಾಗ್ ಮತ್ತು ಸೀತಾಬಾಯಿ ಪ್ರಭು ಬಟ್ಟೆಯ ಗಂಟಿನೊಂದಿಗೆ ಅಡುಗೆ ಕೋಣೆಗೆ ತೆರಳಿ ಗಂಟು ಬಿಚ್ಚಿ ನೋಡಿಗಾದ ಚಿನ್ನಾಭರಣಗಳು ಇರಲಿಲ್ಲ. ಈ ಬಗ್ಗೆ ವಿಚಾರಿಸಲು ಬರುವಷ್ಟರಲ್ಲಿ ಚಾಲಾಕಿ ಕಳ್ಳರು ಲಕ್ಷಾಂತರ ರೂ. ವೌಲ್ಯದ ಚಿನ್ನಾಭರಣಗಳೊಂದಿಗೆ ಪರಾರಿಯಾಗಿದ್ದರು ಎಂದು ತಿಳಿದಿ ಬಂದಿದೆ.
ಘಟನೆಯಿಂದ ಕಂಗಾಲಾದ ಶೀಲಾ ಈ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.





