ಸಾಲಬಾಧೆ: ಇಬ್ಬರು ರೈತರ ಆತ್ಮಹತ್ಯೆ
ತುಮಕೂರು, ಫೆ.26: ಜಿಲ್ಲೆಯ ಗುಬ್ಬಿ ತಾಲೂಕು ಮತ್ತು ತುರುವೇಕೆರೆ ತಾಲೂಕಿನಲ್ಲಿ ನಡೆದಿರುವ ಎರಡು ಪ್ರತ್ಯೇಕ ಘಟನೆಗಳಲ್ಲಿ ಇಬ್ಬರು ರೈತರು ಸಾಲದ ಬಾಧೆಯಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ.
ತುರುವೇಕೆರೆ ತಾಲೂಕು ದಬ್ಬೇಘಟ್ಟ ಹೋಬಳಿ ಲಕ್ಷ್ಮೀದೇವರಹಳ್ಳಿಯ ನಂಜಪ್ಪ(65) ಮೃತರೈತರಾಗಿದ್ದು, ತನ್ನ 30 ಗುಂಟೆ ಜಮೀನಿನಲ್ಲಿ ವ್ಯವಸಾಯ ಮಾಡಿದ್ದು, ಬರದಲ್ಲಿ ಬೆಳೆಯನ್ನು ಉಳಿಸಿಕೊಳ್ಳಲು ದಬ್ಬೆಘಟ್ಟ ಎಸ್‌ಬಿಎಂನಲ್ಲಿ 2,88,942 ರೂ. ಮತ್ತು ಕೈ ಸಾಲ ಮಾಡಿ ನಾಲ್ಕು ಕೊಳವೆ ಬಾವಿಗಳನ್ನು ಕೊರೆಸಿದ್ದರು. ನಾಲ್ಕು ಬಾವಿಗಳು ವಿಫಲವಾಗಿದ್ದವು.
ಇದರಿಂದ ಸಾಲ ತೀರಿಸುವ ದಾರಿ ಕಾಣದೆ ವಾಸದ ಮನೆಯ ಮುಂದಿರುವ ದನದ ಕೊಟ್ಟಿಗೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ತುರುವೇಕೆರೆ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಗುಬ್ಬಿ ತಾಲೂಕು ಸಿ.ಎಸ್.ಪುರ ಹೋಬಳಿ ಇಡಗೂರು ಗ್ರಾಮದ ರೈತ ನರಸೇಗೌಡ(55) ಎಂಬವರು ಶನಿವಾರ ರಾತ್ರಿ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದರು. ಚಿಕಿತ್ಸೆಗಾಗಿ ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಮೃತ ನರಸೇಗೌಡರು ತಮ್ಮ ಭೂಮಿಯ ಅಭಿವೃದ್ದಿಗಾಗಿ ಮಾವಿನಹಳ್ಳಿ ಕಾವೇರಿ-ಕಲ್ಪತರು ಗ್ರಾಮೀಣ ಬ್ಯಾಂಕಿನಲ್ಲಿ 1,03,000 ರೂ. ಬೆಳೆಸಾಲ ಮತ್ತು 2.5 ಲಕ್ಷ ರೂ.ಗಳನ್ನು ಸ್ನೇಹಿತರು, ಸಂಬಂಧಿಕರಿಂದ ಕೈಸಾಲ ಪಡೆದಿದ್ದರು ಎನ್ನಲಾಗಿದೆ







