ದುಬೈ ಓಪನ್: ಸ್ವಿಟೋಲಿನಾಗೆ ಸಿಂಗಲ್ಸ್ ಕಿರೀಟ

ದುಬೈ, ಫೆ.26: ವಿಶ್ವದ ಮಾಜಿ ನಂ.1 ಆಟಗಾರ್ತಿ ಕ್ಯಾರೊಲಿನ್ ವೊಝ್ನಿಯಾಕಿ ಅವರನ್ನು ಮಣಿಸಿದ ಏಳನೆ ಶ್ರೇಯಾಂಕದ ಎಲಿನಾ ಸ್ವಿಟೊಲಿನಾ ದುಬೈ ಓಪನ್‌ನಲ್ಲಿ ಮಹಿಳೆಯರ ಸಿಂಗಲ್ಸ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.
ಇಲ್ಲಿ ಶನಿವಾರ ನಡೆದ ಮಹಿಳೆಯರ ಸಿಂಗಲ್ಸ್ ಫೈನಲ್‌ನಲ್ಲಿ ಉಕ್ರೇನ್‌ನ ಸ್ವಿಟೊಲಿನಾ ಅವರು ಡೆನ್ಮಾರ್ಕ್‌ನ ವೊಝ್ನಿಯಾಕಿ ಅವರನ್ನು 6-4, 6-2 ಸೆಟ್‌ಗಳ ಅಂತರದಿಂದ ಮಣಿಸಿದರು.
ಶುಕ್ರವಾರ ನಡೆದಿದ್ದ ಸೆಮಿಫೈನಲ್‌ನಲ್ಲಿ ಸ್ವಿಟೊಲಿನಾ ಅವರು ಜರ್ಮನಿಯ ಆ್ಯಂಜೆಲಿಕ್ ಕೆರ್ಬರ್‌ರನ್ನು ಒಂದು ಗಂಟೆ, 28 ನಿಮಿಷಗಳ ಹೋರಾಟದಲ್ಲಿ ಜಯ ಸಾಧಿಸಿದ್ದರು. ವೊಝ್ನಿಯಾಕಿಯವರನ್ನು ಮಣಿಸಿರುವ 22ರ ಹರೆಯದ ಸ್ವಿಟೋಲಿನಾ ಡಬ್ಲುಟಿಎ ರ್ಯಾಂಕಿಂಗ್‌ನಲ್ಲಿ ಮೊತ್ತಮೊದಲ ಬಾರಿ ಅಗ್ರ-10ಕ್ಕೆ ಲಗ್ಗೆ ಇಟ್ಟಿದ್ದಾರೆ.
‘‘ಅಗ್ರ-10ರಲ್ಲಿ ಸ್ಥಾನ ಪಡೆಯಬೇಕೆನ್ನುವುದು ನನ್ನ ಕನಸಾಗಿತ್ತು. ಟೂರ್ನಮೆಂಟ್‌ನ್ನು ಜಯಿಸುವ ಮೂಲಕ ಅಗ್ರ-10ರಲ್ಲಿ ಸ್ಥಾನ ಗಿಟ್ಟಿಸಿಕೊಂಡಿರುವುದಕ್ಕೆ ತುಂಬಾ ಸಂತೋಷವಾಗುತ್ತಿದೆ. ಈ ವಾರ ನಾನು ಅಪೂರ್ವ ಟೆನಿಸ್ ಆಡಿದ್ದೆ. ಇಂತಹ ದೊಡ್ಡ ಟೂರ್ನಿಯಲ್ಲಿ ತಾನು ಗೆದ್ದಂತಹ ಮೊದಲ ಟ್ರೋಫಿ ಇದಾಗಿದೆ’’ ಎಂದು ಸ್ವಿಟೋಲಿನಾ ಹೇಳಿದ್ದಾರೆ.





