ಹರ್ಭಜನ್‌ಗೆ ವಾರ್ನರ್ ತಿರುಗೇಟು

ಹೊಸದಿಲ್ಲಿ, ಫೆ.26: ಆಸ್ಟ್ರೇಲಿಯ ತಂಡ ಟೆಸ್ಟ್ ಸರಣಿಯನ್ನಾಡಲು ಭಾರತಕ್ಕೆ ಆಗಮಿಸುವ ಮೊದಲೇ ಈ ಬಾರಿ ಪ್ರವಾಸಿ ಆಸೀಸ್ ತಂಡ ಸರಣಿಯಲ್ಲಿ ವೈಟ್‌ವಾಶ್ ಅನುಭವಿಸಲಿದೆ ಎಂದು ಹೇಳಿಕೆ ನೀಡಿದ್ದ ಭಾರತದ ಹಿರಿಯ ಸ್ಪಿನ್ನರ್ ಹರ್ಭಜನ್ ಸಿಂಗ್‌ಗೆ ಆಸ್ಟ್ರೇಲಿಯದ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ತಿರುಗೇಟು ನೀಡಿದ್ದಾರೆ.
ಹರ್ಭಜನ್ ಮಾತ್ರವಲ್ಲ ಭಾರತದ ಹಲವು ಕ್ರಿಕೆಟ್ ಪಂಡಿತರು ಈ ಬಾರಿ ಆಸ್ಟ್ರೇಲಿಯ ತಂಡ ಭಾರತದಲ್ಲಿ ಸರಣಿಯನ್ನು ಗೆಲ್ಲುವುದು ಕಷ್ಟಕರ ಎಂದು ಹೇಳಿದ್ದರು. ಆದರೆ, ಎಲ್ಲರ ಲೆಕ್ಕಾಚಾರವನ್ನು ತಲೆಕೆಳಗೆ ಮಾಡಿರುವ ಕಾಂಗರೂ ಪಡೆ ಸರಣಿ ಆರಂಭಿಕ ಪಂದ್ಯದಲ್ಲಿ 333 ರನ್ ಅಂತರದ ಜಯ ಸಾಧಿಸಿ ಸತತ 19 ಪಂದ್ಯಗಳಲ್ಲಿ ಜಯ ಸಾಧಿಸಿ ಬೀಗುತ್ತಿದ್ದ ಭಾರತಕ್ಕೆ ಶಾಕ್ ನೀಡಿತ್ತು.
‘‘ನನ್ನ ಅಭಿಪ್ರಾಯದ ಪ್ರಕಾರ ಈಗ ಭಾರತಕ್ಕೆ ಪ್ರವಾಸಕೈಗೊಂಡಿರುವ ಆಸ್ಟ್ರೇಲಿಯ ತಂಡ ಅತ್ಯಂತ ದುರ್ಬಲವಾಗಿದೆ. ಭಾರತೀಯ ಪಿಚ್‌ನಲ್ಲಿ ಸ್ಪಿನ್ನರ್‌ಗಳ ದಾಳಿಯನ್ನು ಸಮರ್ಥವಾಗಿ ಎದುರಿಸುವ ಶಕ್ತಿ ಆ ತಂಡಕ್ಕೆ ಇದ್ದಂತೆ ಕಾಣುತ್ತಿಲ್ಲ. 2013ರಂತೆ ಈ ಬಾರಿಯೂ ಭಾರತ 4-0 ಅಂತರದಿಂದ ಸರಣಿ ಗೆಲ್ಲಲಿದೆ ಎಂದು ಸರಣಿ ಆರಂಭಕ್ಕೆ ಮೊದಲೇ ಹರ್ಭಜನ್ ಹೇಳಿದ್ದರು.
ಆದರೆ, ಶನಿವಾರ ತನ್ನ ನಿಲುವು ಬದಲಿಸಿರುವ ಹರ್ಭಜನ್, ಪುಣೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿರುವ ಸ್ಮಿತ್ ಪಡೆಯನ್ನು ಶ್ಲಾಘಿಸಿದರು.
ಪಂಜಾಬ್ ಸ್ಪಿನ್ನರ್ ನೀಡಿದ್ದ ಈ ಹಿಂದಿನ ಹೇಳಿಕೆಯನ್ನು ನೆನಪಿಸಿದ ಆಸ್ಟ್ರೇಲಿಯದ ಆರಂಭಿಕ ದಾಂಡಿಗ ಡೇವಿಡ್ ವಾರ್ನರ್ ಆಸ್ಟ್ರೇಲಿಯದ ಅಧಿಕೃತ ಟ್ವಿಟ್ಟರ್‌ನಲ್ಲಿ ತಿರುಗೇಟು ನೀಡಿದ್ದಾರೆ.
ವಾರ್ನರ್ ಮಾತ್ರವಲ್ಲ ಭಾರತದ ಕ್ರಿಕೆಟ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹರ್ಭಜನ್ ಹೇಳಿಕೆ ಉಲ್ಲೇಖಿಸಿ ತಮಾಷೆೆ ಮಾಡಿದ್ದಾರೆ.







