ಎರಡನೆ ಟೆಸ್ಟ್‌ನಲ್ಲಿ ಜಯಂತ್, ಇಶಾಂತ್ ಶರ್ಮರನ್ನು ಕೈಬಿಡಲಿ: ಅಝರುದ್ದೀನ್

ಹೊಸದಿಲ್ಲಿ, ಫೆ.26: ಮೊದಲ ಟೆಸ್ಟ್ ಪಂದ್ಯದಲ್ಲಿ ಹೀನಾಯವಾಗಿ ಸೋತಿರುವ ಭಾರತ ತಂಡ ಆಸ್ಟ್ರೇಲಿಯ ವಿರುದ್ಧದ ಎರಡನೆ ಟೆಸ್ಟ್‌ನಲ್ಲಿ ಆಡುವ 11ರ ಬಳಗದಲ್ಲಿ ಹಲವು ಬದಲಾವಣೆ ಮಾಡಲೇಬೇಕಾದ ಅಗತ್ಯವಿದೆ ಎಂದು ಭಾರತದ ಮಾಜಿ ನಾಯಕ ಮುಹಮ್ಮದ್ ಅಝರುದ್ದೀನ್ ಅಭಿಪ್ರಾಯಪಟ್ಟಿದ್ದಾರೆ.
‘‘ಯಾವುದೇ ರೀತಿಯ ಬ್ಯಾಟಿಂಗ್ ವೈಫಲ್ಯ ತಂಡಕ್ಕೆ ಹಿನ್ನಡೆಯಾಗುತ್ತದೆ. ಭಾರತ ಸರಣಿ ಸೋಲಲಿದೆ ಎಂದು ನಾನು ಹೇಳಲಾರೆ. ಆದರೆ, ಆಡುವ ಮೊದಲು ಪಿಚ್‌ನ ಗುಣಮಟ್ಟವನ್ನು ಪರೀಕ್ಷಿಸಬೇಕು. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಪಿಚ್‌ನಲ್ಲಿ ಇಷ್ಟೊಂದು ಟರ್ನ್ ಆಗಲಾರದು. ಹಾಗಾಗಿ ಮುಂದಿನ ಪಂದ್ಯದಲ್ಲಿ ಜಯಂತ್ ಯಾದವ್ ಹಾಗೂ ಇಶಾಂತ್ ಶರ್ಮರನ್ನು ಆಡುವ 11ರ ಬಳಗದಿಂದ ಕೈಬಿಡಬೇಕು’’ ಅಝರ್ ಆಗ್ರಹಿಸಿದರು.
ಭಾರತ ಪುಣೆಯಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ 333 ರನ್‌ಗಳ ಅಂತರದಿಂದ ಸೋತಿದ್ದು, ನಾಲ್ಕು ಪಂದ್ಯಗಳ ಸರಣಿಯಲ್ಲಿ 0-1 ರಿಂದ ಹಿನ್ನಡೆ ಅನುಭವಿಸಿದ್ದು, ಮಾ.4ರಂದು ಬೆಂಗಳೂರಿನಲ್ಲಿ 2ನೆ ಟೆಸ್ಟ್ ಪಂದ್ಯವನ್ನು ಆಡಲಿದೆ.
ಭಾರತದ ಬ್ಯಾಟಿಂಗ್ ವಿಭಾಗಕ್ಕೆ ಸಂಬಂಧಿಸಿ ಹೇಳುವುದಾದರೆ ಹೆಚ್ಚುವರಿ ಬ್ಯಾಟ್ಸ್‌ಮನ್‌ನನ್ನು ಆಡಿಸಬೇಕು. ಜಯಂತ್ ಯಾದವ್ ಬದಲಿಗೆ ಕರುಣ್ ನಾಯರ್‌ಗೆ ಅವಕಾಶ ನೀಡಬೇಕು. ಇಶಾಂತ್ ಬದಲಿಗೆ ಭುವನೇಶ್ವರ ಕುಮಾರ್‌ರಂತಹ ಸ್ವಿಂಗ್ ಬೌಲರ್‌ನ್ನು ಆಡಿಸುವತ್ತ ವಿರಾಟ್ ಗಮನ ನೀಡಬೇಕು ಎಂದು ಭಾರತದ ಪರ 99 ಟೆಸ್ಟ್ ಪಂದ್ಯಗಳನ್ನು ಆಡಿದ್ದ ಅಝರ್ ಹೇಳಿದರು.







