ಐಸಿಸ್‌ಗೆ ಸೇರಿದ್ದ ಕಾಸರಗೋಡಿನ ಯುವಕ ಸಾವು: ಕುಟುಂಬದ ಹೇಳಿಕೆ
ತಿರುವನಂತಪುರ,ಫೆ.26: ಅಫ್ಘಾನಿಸ್ತಾನದಲ್ಲಿ ಐಸಿಸ್‌ಗೆ ಸೇರಿದ್ದ 21 ಜನರ ಪೈಕಿ ಕಾಸರಗೋಡಿನ 24ರ ಹರೆಯದ ಹಫೀಝುದ್ದೀನ್ ಎಂಬಾತ ಡ್ರೋನ್ ದಾಳಿಯಲ್ಲಿ ಕೊಲ್ಲಲ್ಪಟ್ಟಿದ್ದಾನೆ ಎಂದು ಆತನ ಕುಟುಂಬವು ರವಿವಾರ ತಿಳಿಸಿದೆ.
ಶನಿವಾರ ರಾತ್ರಿ ಹಫೀಝುದ್ದೀನ್‌ನ ತಾಯಿಯ ಮೊಬೈಲ್ ಫೋನ್‌ಗೆ ಬಂದಿರುವ ಸಂದೇಶದಲ್ಲಿ ಆತನ ಸಾವಿನ ಮಾಹಿತಿಯಿದೆ ಎಂದು ಮೂಲಗಳು ತಿಳಿಸಿದವು.
‘‘ಅಲ್ ಹಮ್ದುಲಿಲ್ಲಾ. ಕಬರ್ ಅಡಕ್ಕಿ (ದೇವರಿಗೆ ವಂದನೆಗಳು. ದಫನ್ ಮಾಡಿ ಆಯಿತು). ನಾವು ನಮ್ಮ ಸರದಿಗಾಗಿ ಕಾಯುತ್ತಿದ್ದೇವೆ.....ಇನ್‌ಶಾ ಅಲ್ಲಾಹ್ ’’ಇದು ಅಕ್ಮಜೀದ್ ಎಂಬಾತ ರವಾನಿಸಿರುವ ಟೆಲಿಗ್ರಾಂ ಸಂದೇಶದಲ್ಲಿರುವ ಬರಹ. 2016,ಜೂನ್‌ನಲ್ಲಿ ಉತ್ತರ ಕೇರಳದಿಂದ ನಾಪತ್ತೆಯಾಗಿದ್ದ ಜನರಲ್ಲಿ ಈ ಅಕ್ಮಜೀದ್ ಕೂಡ ಒಬ್ಬನಾಗಿದ್ದ.
ವಾಟ್ಸ್‌ಆ್ಯಪ್‌ನಂತಹ ಇಂಟರ್ನೆಟ್ ಆಧಾರಿತ ಸಂವಹನ ಆ್ಯಪ್ ಆಗಿರುವ ಟೆಲಿಗ್ರಾಂ ಐಸಿಸ್‌ನ ನೆಚ್ಚಿನ ಸಂಪರ್ಕ ವಿಧಾನವಾಗಿದೆ. ಟೆಲಿಗ್ರಾಂ ಮೂಲಕ ರವಾನೆಯಾದ ಸಂದೇಶಗಳು 24 ಗಂಟೆಗಳ ಬಳಿಕ ಸ್ವಯಂ ನಾಶಗೊಳ್ಳುತ್ತವೆ. ಆರು ಮಹಿಳೆಯರು ಮತ್ತು ಮೂವರು ಮಕ್ಕಳನ್ನೊಳಗೊಂಡಿದ್ದ 21 ಜನರ ಗುಂಪಿನ ನಾಪತ್ತೆ ದೇಶಾದ್ಯಂತ ಆಘಾತದ ಅಲೆಗಳನ್ನು ಸೃಷ್ಟಿಸಿತ್ತು. ಈ ಪೈಕಿ ಹೆಚ್ಚಿನವರು ಸುಶಿಕ್ಷಿತರಾಗಿದ್ದು, ಮೇಲ್ಮಧ್ಯಮ ವರ್ಗದ ಕುಟುಂಬಗಳಿಗೆ ಸೇರಿದವರಾಗಿದ್ದರು.
ಈ ಪೈಕಿ ಕೆಲವರು ಬಳಿಕ ತಮ್ಮ ಬಂಧುಗಳಿಗೆ ದೂರವಾಣಿ ಕರೆಗಳನ್ನು ಮಾಡಿ ತಾವು ಇಸ್ಲಾಮಿಕ್ ಸ್ಟೇಟ್‌ನ್ನು ಸೇರಿರುವುದಾಗಿ ತಿಳಿಸಿದ್ದರು.
ಸಂದೇಶಗಳು ಅಫ್ಘಾನಿಸ್ತಾನದಿಂದ ಬಂದಿವೆ ಎಂದು ಗುಪ್ತಚರ ಸಂಸ್ಥೆಗಳು ನಂಬಿದ್ದು, ಇತ್ತೀಚಿನ ಮಾಧ್ಯಮ ವರದಿಗಳು ಇದನ್ನು ಪುಷ್ಟೀಕರಿಸುವಂತಿವೆ.