ಆನ್‌ಲೈನ್‌ನಲ್ಲಿ ಆನಾವರಣಗೊಳ್ಳಲಿದೆ ರಾಷ್ಟ್ರಪತಿ ಭವನ
ರಾಷ್ಟ್ರಪತಿ ಭವನದ ಕುರಿತ ಅನೇಕ ಕೃತಿಗಳು, ದಾಖಲೆಗಳ ಡಿಜಿಟಲೀಕರಣ ಪೂರ್ಣ
ಹೊಸದಿಲ್ಲಿ, ಫೆ.25: ಸುಮಾರು 340 ಕೊಠಡಿಗಳಿರುವ ರಾಷ್ಟ್ರಪತಿ ಭವನದ ವಾಸ್ತುಶಿಲ್ಪ ಇತಿಹಾಸ ಹಾಗೂ ಪರಂಪರೆ ಬಗ್ಗೆ ಈಗಾಗಲೇ ಹಲವಾರು ಪುಸ್ತಕಗಳು ಬಂದಿದ್ದು, ಅವು ಶೀಘ್ರದಲ್ಲೇ ಆನ್‌ಲೈನ್‌ನಲ್ಲೂ ಓದುಗರಿಗೆ ಲಭ್ಯವಾಗಲಿವೆ.
ಖ್ಯಾತ ಬ್ರಿಟಿಷ್ ವಾಸ್ತುಶಿಲ್ಪ ತಜ್ಞ ದಿ.ಎಡ್ವಿನ್ ಲುಟ್ಯೆನ್ಸ್ ವಿನ್ಯಾಸಗೊಳಿಸಿದ್ದ ಹಾಗೂ ನಿರ್ಮಿಸಿದ್ದ ಈ ಮಹಾನ್ ಕಟ್ಟಡದ ವಾಸ್ತುಶಿಲ್ಪ ಹಾಗೂ ಸಾಂಸ್ಕೃತಿಕ ವೈಭವದ ಕುರಿತ ಸಮಗ್ರ ಮಾಹಿತಿಗಳು ಇನ್ನು ಮುಂದೆ ಅಂತರ್ಜಾಲದಲ್ಲಿಯೂ ಅನಾವರಣಗೊಳ್ಳಲಿದೆ.
ರಾಷ್ಟ್ರಪತಿ ಭವನದ ಬಹುಸಂಪುಟ ದಾಖಲೀಕರಣ ಯೋಜನೆಯನ್ನು ಮೂರು ವರ್ಷಗಳ ಹಿಂದೆ, ರಾಷ್ಟ್ರಪತಿಯವರ ಕಾರ್ಯಾಲಯವು, ಹೊಸದಿಲ್ಲಿಯ ಇಂದಿರಾಗಾಂಧಿ ರಾಷ್ಟೀಯ ಕಲಾ ಕೇಂದ್ರ (ಐಜಿಎನ್‌ಸಿಎ)ದ ಸಹಯೋಗದೊಂದಿಗೆ ಆರಂಭಿಸಲಾಗಿತ್ತು.
ಕಲೆ, ಸಂಸ್ಕೃತಿ ಹಾಗೂ ಭಾರತದ ಪರಂಪರೆ ಕುರಿತ ಮುಕ್ತ ಆನ್‌ಲೈನ್ ಸಂಪನ್ಮೂಲ ‘ಸಹಾಪೇಡಿಯಾ’ 2014ರಲ್ಲಿ ಈ ಯೋಜನೆಯನ್ನು ಆರಂಭಿಸಿತ್ತು. ವಿವಿಧ ಕ್ಷೇತ್ರಗಳ ಪರಿಣಿತರು ರಾಷ್ಟ್ರಪತಿ ಭವನದ ಕುರಿತು ಬರೆದಿರು ಸಂಶೋಧನಾತ್ಮಕ ಕೃತಿಗಳ 11 ಸಂಪುಟಗಳನ್ನು ಅದು ಈಗಾಗಲೇ ಆನ್‌ಲೈನ್‌ನಲ್ಲಿ ಸಂಕಲನಗೊಳಿಸಿದೆ.
ರಾಷ್ಟ್ರಪತಿಭವನದ ಇತಿಹಾಸ ಹಾಗೂ ಪರಂಪರೆಯ ಬಗ್ಗೆ ಉತ್ತಮ ತಿಳುವಳಿಕೆಯನ್ನು ಪಡೆಯಲು ಸಂಶೋಧಕರಿಂದ ಹಿಡಿದು ಜನಸಾಮಾನ್ಯರಿಗೆ ಇದು ಅತ್ಯಂತ ವೌಲ್ಯಯುತವಾದುದಾಗಿದೆ ಎಂದು ಸಹಾಪೇಡಿಯಾದ ಯೋಜನಾ ಪ್ರಬಂಧಕಿ ಯಶಸ್ವಿನಿ ಸಿನ್ಹಾ ತಿಳಿಸಿದ್ದಾರೆ.
ಮಕ್ಕಳಿಗಾಗಿ ಎರಡು ಪುಸ್ತಕಗಳು ಸೇರಿದಂತೆ ಏಳು ಮುಖ್ಯ ಸಂಪುಟಗಳನ್ನು ಹಾಗೂ ನಾಲ್ಕು ಹೆಚ್ಚುವರಿ ಸಂಪುಟಗಳನ್ನು ಒಳಗೊಂಡಿರುವ ಈ ಆನ್‌ಲೈನ್ ಸಂಗ್ರಹವು ಸ್ವಾತಂತ್ರಪೂರ್ವದಲ್ಲಿ ವೈಸ್‌ರಾಯ್ ನಿವಾಸವೆಂದು ಕರೆಸಿಕೊಳ್ಳುತ್ತಿದ್ದ ಈ ಐತಿಹಾಸಿಕ ಕಟ್ಟಡದ ಬಗ್ಗೆ ವಿಸ್ತೃತ ವಿವರಣೆಯನ್ನು ನೀಡುತ್ತದೆ. ಒಂದು ಸಂಪುಟದಲ್ಲಿ ರಾಷ್ಟ್ರಪತಿಯವರ ಅಶ್ವಾರೋಹಿ ಅಂಗರಕ್ಷಕದಳದ ಕುರಿತು ಸಮಗ್ರವಾದ ಚಿತ್ರಣವನ್ನು ನೀಡಲಾಗಿದೆ. ಈ ಮಹತ್ವದ ಯೋಜನೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಸುಮಾರು 50 ಮಂದಿ ವಿದ್ವಾಂಸರು, ಶಿಕ್ಷಣ ತಜ್ಞರು, ಸಂಪಾದಕರು ಹಾಗೂ ವಿನ್ಯಾಸಕರನ್ನೊಳಗೊಂಡ ತಂಡಕ್ಕೆ, ಇತ್ತೀಚೆಗೆ ರಾಷ್ಟ್ರಪತಿ ಪ್ರಣವ್ ಮುಖರ್ಜಿ ತನ್ನ ನಿವಾಸದಲ್ಲಿ ಸತ್ಕಾರಕೂಟವನ್ನು ಏರ್ಪಡಿಸಿದ್ದರು.
ರಾಷ್ಟ್ರಪತಿ ಭವನದ ಕುರಿತ ಹಲವಾರು ಸಚಿತ್ರ ನಿರೂಪಣೆಗಳು ಹಾಗೂ ಛಾಯಾಚಿತ್ರಗಳು, ಬರಹಗಳನ್ನು ಕೇಂದ್ರ ಸರಕಾರದ ಪುರಾತತ್ವ ದಾಖಲೆಗಳ ಸಂಶೋಧನಾ ಸಂಸ್ಥೆಯು ಒದಗಿಸಿತ್ತು.





