ಒಂದು ಸೋಲು ಸರಣಿಗೆ ಧಕ್ಕೆಯಾಗದು: ತೆಂಡುಲ್ಕರ್

ಹೊಸದಿಲ್ಲಿ,ಫೆ.26: ಪುಣೆಯಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಹೀನಾಯವಾಗಿ ಸೋತು ಮುಜುಗರಕ್ಕೀಡಾಗಿರುವ ವಿರಾಟ್ ಕೊಹ್ಲಿ ಪಡೆ ಸರಣಿಯಲ್ಲಿ ಪ್ರತಿ ಹೋರಾಟವನ್ನು ನೀಡಲಿದೆ. ಕೇವಲ ಒಂದು ಪಂದ್ಯದಲ್ಲಿನ ಸೋಲು ಸರಣಿ ಸೋಲಲು ಕಾರಣವಾಗದು’’ಎಂದು ಭಾರತೀಯ ತಂಡಕ್ಕೆ ಕ್ರಿಕೆಟ್ ಐಕಾನ್ ಸಚಿನ್ ತೆಂಡುಲ್ಕರ್ ಕಿವಿಮಾತು ಹೇಳಿದ್ದಾರೆ.
ರವಿವಾರ ಬೆಳಗ್ಗೆ ದಿಲ್ಲಿ ಮ್ಯಾರಥಾನ್‌ಗೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ತೆಂಡುಲ್ಕರ್, ನಾಲ್ಕು ಪಂದ್ಯಗಳ ಟೆಸ್ಟ್ ಸರಣಿ ಇನ್ನೂ ಮುಕ್ತವಾಗಿದೆ. ಭಾರತ-ಆಸ್ಟ್ರೇಲಿಯ ನಡುವಿನ ಟೆಸ್ಟ್ ಸರಣಿ ಪೈಪೋಟಿಯಿಂದ ಕೂಡಿರುತ್ತದೆ. ಪಂದ್ಯದಲ್ಲಿ ಸೋಲು ಸರ್ವೇಸಾಮಾನ್ಯ. ಮೊದಲ ಟೆಸ್ಟ್‌ನಲ್ಲಿ ಸೋತ ಮಾತ್ರಕ್ಕೆ ಸರಣಿ ಸೋಲುತ್ತೇವೆಂಬ ಅರ್ಥವಲ್ಲ. ಸರಣಿ ಈಗಲೂ ಮುಕ್ತವಾಗಿದ್ದು, ಯಾರೂ ಕೂಡ ಗೆಲ್ಲಬಹುದು’’ ಎಂದರು.
ಭಾರತೀಯ ತಂಡದ ಸ್ಫೂರ್ತಿಯನ್ನು ತಿಳಿದವರಿಗೆ ಆ ತಂಡ ಮರು ಹೋರಾಟ ನೀಡಲಿದೆ ಎಂದು ಗೊತ್ತಿರುತ್ತದೆ. ಮುಂದಿನ ಪಂದ್ಯದಲ್ಲಿ ಭಾರತ ತಿರುಗೇಟು ನೀಡುವುದರಲ್ಲಿ ಅನುಮಾನವಿಲ್ಲ ಎಂದು ತೆಂಡುಲ್ಕರ್ ಹೇಳಿದರು.





