ಮಂಗಳೂರು: 194 ವಕ್ಫ್ ಆಸ್ತಿ ‘ಕರ್ನಾಟಕ ರಾಜ್ಯಪತ್ರ’ದಲ್ಲಿ ಪ್ರಕಟ
ಮಂಗಳೂರು, ಫೆ.26: ಸರಕಾರಿ ಹಾಗೂ ಖಾಸಗಿ ಜಮೀನಿನಲ್ಲಿದ್ದ ಸರ್ವೇ ಆಗದೆ ಬಾಕಿಯುಳಿದಿದ್ದ ಮಂಗಳೂರು ತಾಲೂಕಿನ 112 ಸಂಸ್ಥೆಗಳ 194 ವಕ್ಫ್ ಆಸ್ತಿಯು ‘ಕರ್ನಾಟಕ ರಾಜ್ಯಪತ್ರ’ದಲ್ಲಿ ಪ್ರಕಟವಾಗಿದೆ.
ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಕಾರ್ಯಾಲಯವು ವಕ್ಫ್ 1995ರ ಕಾಯ್ದೆಯ ಸೆಕ್ಷನ್ 5(2)ರ ಅನ್ವಯ ತಾಲೂಕಿನ ಸುಮಾರು 75,95.75 ಎಕರೆ ಜಮೀನಿನ ಸರ್ವೇ ನಡೆಸಿದೆ. ಇದರ ವಿವರ ಕರ್ನಾಟಕ ವಕ್ಫ್ ಬೋರ್ಡ್‌ನ ಪರಿಶೀಲನೆಯ ಬಳಿಕ ಕರ್ನಾಟಕ ರಾಜ್ಯಪತ್ರದಲ್ಲಿ ಅಧಿಕೃತವಾಗಿ ಪ್ರಕಟಿಸಲ್ಪಟ್ಟಿದೆ. ಹಾಗಾಗಿ ಈ ಪಟ್ಟಿಯಲ್ಲಿರುವ ಆರ್‌ಟಿಸಿ ಆಗದ ಜಮೀನಿಗೆ ‘ಆರ್‌ಟಿಸಿ ಭಾಗ್ಯ’ ಲಭಿಸಲಿದೆ.
1968ರಲ್ಲಿ ದ.ಕ. ಜಿಲ್ಲೆಯ ನೂರಾರು ವಕ್ಫ್ ಆಸ್ತಿ ಸರ್ವೇ ಆಗಿತ್ತು. ಆ ಬಳಿಕ ಆಗಿರಲೇ ಇಲ್ಲ. ಆ ಹಿನ್ನೆಲೆಯಲ್ಲಿ ವಕ್ಫ್ ಇಲಾಖೆಯ ಸೂಚನೆಯಂತೆ ದ.ಕ. ಜಿಲ್ಲಾ ಇಲಾಖೆಯು ವಿಶೇಷ ಆಸಕ್ತಿ ವಹಿಸಿ ಸರ್ವೇ ಕಾರ್ಯ ನಡೆಸಿ ವಕ್ಫ್ ಜಮೀನನ್ನು ಅಧಿಕೃತಗೊಳಿಸಲು ಪ್ರಯತ್ನ ನಡೆಸಿತ್ತು. ಅದಕ್ಕೀಗ ಫಲ ಲಭಿಸಿದೆ. ಆ ಮೂಲಕ ಮಸೀದಿ, ಮದ್ರಸ, ದರ್ಗಾಗಳು ವಕ್ಫ್ ಆಸ್ತಿಯಾಗಿ ಪರಿಗಣಿಸಲ್ಪಟ್ಟಿವೆ. ಇನ್ನೂ ಹಲವು ವಕ್ಫ್ ಸಂಸ್ಥೆಗಳು ಸರ್ವೇ ಮಾಡಿಸಲು ಬಾಕಿ ಇದ್ದು, ಅದಕ್ಕಾಗಿ ಪ್ರಯತ್ನ ನಡೆದಿದೆ ಎಂದು ತಿಳಿದುಬಂದಿದೆ.







