ಸುಪ್ರೀಂ ಆದೇಶ: ರಾಜ್ಯದ ಸುಮಾರು 10,000 ದಲಿತ ಸರಕಾರಿ ನೌಕರರಿಗೆ ಹಿಂಭಡ್ತಿ ಸಾಧ್ಯತೆ
ಬೆಂಗಳೂರು,ಫೆ.26: ಭಡ್ತಿಗಳಲ್ಲಿ ಮೀಸಲಾತಿಯನ್ನು ಸರ್ವೋಚ್ಚ ನ್ಯಾಯಾಲಯವು ಇತ್ತೀಚೆಗೆ ರದ್ದುಗೊಳಿಸಿರುವ ಪರಿಣಾಮ ಹಿಂಭಡ್ತ್ತಿಯನ್ನು ಪಡೆಯುವ ಭೀತಿಯಲ್ಲಿರುವ ರಾಜ್ಯದ ಸುಮಾರು 10,000 ದಲಿತ ಸರಕಾರಿ ನೌಕರರ ಭವಿಷ್ಯ ತೂಗುಯ್ಯಿಲೆಯಲ್ಲಿದೆ.
ರಾಜ್ಯದ ಕಾಂಗ್ರೆಸ್ ಸರಕಾರವು ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಲು ಸಜ್ಜಾಗುತ್ತಿದ್ದು, 2018ರ ರಾಜ್ಯ ವಿಧಾನಸಭಾ ಚುನಾವಣೆಗೆ ಮುನ್ನ ರಾಜಕೀಯ ಹಾನಿಯನ್ನು ತಪ್ಪಿಸಲು ಸರ್ವರನ್ನೂ ಸಂತೃಪ್ತಿಗೊಳಿಸಬಲ್ಲ ಸೂತ್ರವೊಂದನ್ನು ರೂಪಿಸಲು ಹೆಣಗಾಡುತ್ತಿದೆ.
ನಾವು ಇಕ್ಕಟ್ಟಿನ ಸ್ಥಿತಿಯಲ್ಲಿದ್ದೇವೆ. ದಲಿತರ ಪರವಾಗಿ ನಿಲ್ಲುವಲ್ಲಿ ನಾವು ವಿಫಲರಾದರೆ ಅವರು ನಮ್ಮ ಪಕ್ಷಕ್ಕೆ ದಲಿತ ವಿರೋಧಿ ಪಟ್ಟವನ್ನು ಕಟ್ಟುತ್ತಾರೆ ಮತ್ತು ಇದು ಪಕ್ಷದ ಚುನಾವಣಾ ಭವಿಷ್ಯದ ಮೇಲೆ ಭಾರೀ ಪರಿಣಾಮವನ್ನು ಬೀರಬಹುದು. ನಾವು ಅವರಿಗಾಗಿ ಹೋರಾಡಲು ನಿರ್ಧರಿಸಿದರೆ ಇತರ ಹಿಂದುಳಿದವರು ಮತ್ತು ಮೇಲ್ವರ್ಗದ ಸಮುದಾಯಗಳ ತಾತ್ಸಾರಕ್ಕೆ ಗುರಿಯಾಗಬೇಕಾಗುತ್ತದೆ ಎಂದು ಚಿಂತಾಕ್ರಾಂತ ಮುಖ ಹೊತ್ತಿದ್ದ ಹಿರಿಯ ಸಚಿವರೋರ್ವರು ನೋವು ವ್ಯಕ್ತಪಡಿಸಿದರು.
ಈ ಬಗ್ಗೆ ಸರಕಾರವು ಅಕೌಂಟೆಂಟ್ ಜನರಲ್ ಅವರ ಅಭಿಪ್ರಾಯವನ್ನು ಕೇಳಿದು,್ದ ಅವರು ನೀಡುವ ಮಾಹಿತಿಯನ್ನು ಆಧರಿಸಿ ಅಂತಿಮ ನಿರ್ಧಾರವೊಂದನ್ನು ತೆಗೆದುಕೊಳ್ಳಲಿದ್ದೇವೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ಅವರು ತಿಳಿಸಿದರು.
ರಾಜ್ಯ ಸರಕಾರವು 1978ರಿಂದ ಮೀಸಲಾತಿ ಆಧಾರದಲ್ಲಿ ಪರಿಶಿಷ್ಟ ಜಾತಿ-ಪಂಗಡಗಳ ನೌಕರರಿಗೆ ಬಡ್ತಿಯಲ್ಲಿ ನೀಡಿದ್ದ ಜೇಷ್ಠತೆಯನ್ನು ಫೆ.9ರಂದು ಸರ್ವೋಚ್ಚ ನ್ಯಾಯಾಲಯವು ರದ್ದುಗೊಳಿಸಿದ್ದು, ಹೀಗೆ ಭಡ್ತಿ ಪಡೆದವರನ್ನು ಹಿಂಭಡ್ತಿಗೊಳಿಸಲು ಮೂರು ತಿಂಗಳ ಗಡುವು ನೀಡಿದೆ. ಈ ಗಡುವಿನೊಳಗೆ ಸರಕಾರವು ಮೇಲ್ಮನವಿಯನ್ನು ಸಲ್ಲಿಸಬಹುದಾಗಿದೆ.
ಸರಕಾರವು ಜೇಷ್ಠತೆಯನ್ನು ನಿರ್ಧರಿಸಲು ಮೀಸಲಾತಿಯನ್ನು ಆಧರಿಸಿದ್ದರಿಂದ ಉನ್ನತ ಹುದ್ದೆಗಳನ್ನು ಅನುಭವಿಸುತ್ತಿರುವ ಎಸ್‌ಸಿ/ಎಸ್‌ಟಿ ಅಧಿಕಾರಿಗಳು ಭಾರೀ ಸಂಖ್ಯೆಯಲ್ಲಿರುವುದನ್ನು ಪರಿಗಣಿಸಿದರೆ ನ್ಯಾಯಾಲಯದ ಆದೇಶವು ಸರಕಾರದ ಪಾಲಿಗೆ ಚಿಂತೆಯನ್ನು ತಂದಿಟ್ಟಿದೆ. ಇನ್ನೊಂದೆಡೆ ಭಡ್ತಿಗಾಗಿ ವರ್ಷಗಳಿಂದಲೂ ಕಾದು ಕುಳಿತಿರುವ ಸಾಮಾನ್ಯ ಮತ್ತು ಇತರ ಹಿಂದುಳಿದ ವರ್ಗಗಳ ನೌಕರರು ಕೊನೆಗೂ ತಮ್ಮ ಪಾಲನ್ನು ಪಡೆಯಬಹುದು.
ಇಂತಹ ಕಠೋರ ನಿರ್ಧಾರವನ್ನು ಜಾರಿಗೊಳಿಸುವ ಮುನ್ನ ಸರಕಾರವು ಗುಂಪುವಾರು ಸಮೀಕ್ಷೆಗಳನ್ನು ಇನ್ನೂ ನಡೆಸಬೇಕಾಗಿದೆ ಎಂದು ಹಿರಿಯ ಸರಕಾರಿ ಅಧಿಕಾರಿಯೋರ್ವರು ತಿಳಿಸಿದರು.
65 ಸರಕಾರಿ ಇಲಾಖೆಗಳಲ್ಲಿ ಪ್ರತಿಯೊಂದರಲ್ಲಿಯೂ ಶೇ.18ರಷ್ಟು ಹುದ್ದೆಗಳನ್ನು ಎಸ್‌ಸಿ-ಎಸ್‌ಟಿಗಳಿಗೆ ಮೀಸಲಿಟ್ಟಿರುವುದರಿಂದ 7,000-10,000 ಅಧಿಕಾರಿಗಳು ಮತ್ತು ನೌಕರರು ಹಿಂಭಡ್ತಿ ಪಡೆಯಬಹುದು ಎಂದು ಕರ್ನಾಟಕ ರಾಜ್ಯ ನೌಕರರ ಸಂಘದ ಅಧ್ಯಕ್ಷ ಬಿ.ಪಿ.ಮಂಜೇಗೌಡ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ತಮ್ಮ ಸಂಘವು ಎಲ್ಲ ಸರಕಾರಿ ನೌಕರರ ಏಳಿಗೆಯ ಬಗ್ಗೆ ಕಾಳಜಿ ಹೊಂದಿರುವುದರಿಂದ ದಲಿತರ ಅಥವಾ ಇತರ ಸಮುದಾಯದವರ ಪರ ಹೋರಾಟ ನಡೆಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಆದರೆ ಹಿಂಭಡ್ತಿ ಕ್ರಮವನ್ನು ವಿರೋಧಿಸಲು ಮೀಸಲಾತಿ ಪರ ಗುಂಪುಗಳು ನಿರ್ಧರಿಸಿವೆ. ಸರಕಾರದ ಮುಂದಿನ ಹೆಜ್ಜೆಯ ಮೇಲೆ ನಾವು ನಿಕಟ ನಿಗಾಯಿರಿಸಿದ್ದೇವೆ ಮತ್ತು ಅಗತ್ಯವಾದರೆ ಸಾಮೂಹಿಕ ಪ್ರತಿಭಟನೆಗೆ ಸಜ್ಜಾಗಿರುವಂತೆ ಎಸ್‌ಸಿ-ಎಸ್‌ಟಿ ನೌಕರರಿಗೆ ಸೂಚಿಸಿದ್ದೇವೆ ಎಂದು ಹೇಳಿದ ಹಿರಿಯ ಎಸ್‌ಸಿ-ಎಸ್‌ಟಿ ಅಧಿಕಾರಿಯೋರ್ವರು ಕಚೇರಿ ಕೆಲಸಗಳನ್ನು ಸ್ಥಗಿತಗೊಳಿಸುವ ಸಾಧ್ಯತೆಯನ್ನು ತಳ್ಳಿ ಹಾಕಲಿಲ್ಲ.