ಮೌಖಿಕ ಆದೇಶ ಸಿಎಂ ಕೊಟ್ಟರೂ ಪಾಲಿಸುವುದಿಲ್ಲ ಎಂದ ಬಿಹಾರ ಐಎಎಸ್ ಅಧಿಕಾರಿಗಳು!
ವಿವರಗಳಿಗೆ ಕ್ಲಿಕ್ ಮಾಡಿ

ಪಾಟ್ನ, ಫೆ.27: ಮುಖ್ಯಮಂತ್ರಿ ನಿತೀಶ್ ಕುಮಾರ್ ಸೇರಿದಂತೆ ಸರಕಾರದ ಯಾವುದೇ ಸಚಿವರು ನೀಡುವ ಮೌಖಿಕ ಆದೇಶವನ್ನು ತಾವು ಗೌರವಿಸುವುದಿಲ್ಲ ಎಂದು ಬಿಹಾರದ ಹಿರಿಯ ಅಧಿಕಾರಿಗಳು ಪ್ರಕಟಿಸಿದ್ದಾರೆ. ಕೇವಲ ಲಿಖಿತ ಆದೇಶವನ್ನಷ್ಟೇ ಗೌರವಿಸುವುದಾಗಿ ಐಎಎಸ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಐಎಎಸ್ ಅಧಿಕಾರಿಗಳ ಸಭೆಯಲ್ಲಿ ಈ ಕುರಿತ ನಿರ್ಧಾರ ಕೈಗೊಳ್ಳಲಾಗಿದೆ. ಹಿರಿಯ ಅಧಿಕಾರಿ ಹಾಗೂ ಬಿಹಾರ ಸಿಬ್ಬಂದಿ ಆಯ್ಕೆ ಆಯೋಗದ ಅಧ್ಯಕ್ಷ ಸುಧೀರ್ ಕುಮಾರ್ ಅವರನ್ನು ಬಂಧಿಸಿದ ಎರಡು ದಿನಗಳ ಬಳಿಕ ಈ ಸಭೆ ನಡೆದಿದ್ದು, ಅಧಿಕಾರಿಯನ್ನು ಉದ್ದೇಶಪೂರ್ವಕವಾಗಿ ಅಕ್ರಮದಲ್ಲಿ ಸಿಕ್ಕಿಸಿಹಾಕಲಾಗಿದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟರು.
ಯಾವುದೇ ನೇಮಕಾತಿ ಆಯೋಗದ ಅಧ್ಯಕ್ಷ ಪದವಿಯನ್ನು ತಾವು ಸ್ವೀಕರಿಸುವುದಿಲ್ಲ ಎಂಬ ನಿರ್ಣಯವನ್ನು ಕೂಡಾ ಆಂಗೀಕರಿಸಲಾಗಿದೆ. ಜೈಲುಪಾಲಾಗಿರುವ ಹಿರಿಯ ಐಎಎಸ್ ಅಧಿಕಾರಿ ಸುಧೀರ್ ಕುಮಾರ್ ಅವರಿಗೆ ತಗುಲುವ ಎಲ್ಲ ಕಾನೂನು ವೆಚ್ಚವನ್ನು ಸಂಘವೇ ಭರಿಸಲು ಕೂಡಾ ನಿರ್ಧಾರ ಕೈಗೊಳ್ಳಲಾಯಿತು. ತಮ್ಮ ಬೇಡಿಕೆಗಳು ಈಡೇರುವವರೆಗೂ ಕಪ್ಪುಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸಲು ನಿರ್ಧರಿಸಲಾಗಿದೆ.
ಸಂಘದ ಕಾರ್ಯದರ್ಶಿ ವಿವೇಕ್ ಸಿಂಗ್ ಈ ಬಗ್ಗೆ ಹೇಳಿಕೆ ನೀಡಿ, ಹಿರಿಯ ಅಧಿಕಾರಿಯ ಬಂಧನ ನ್ಯಾಯಸಮ್ಮತವಲ್ಲ. ಪ್ರಕರಣದ ಬಗ್ಗೆ ರಾಜ್ಯ ಪೊಲೀಸರು ನಡೆಸಿದ ತನಿಖೆ ಸಮರ್ಪಕವಾಗಿಲ್ಲ. ಈ ಬಗ್ಗೆ ಸಿಬಿಐ ತನಿಖೆಗೆ ಆದೇಶಿಸಬೇಕು ಎಂದು ಆಗ್ರಹಿಸಿದರು. ಬಿಹಾರ ಸಿಬ್ಬಂದಿ ಆಯ್ಕೆ ಸೇವಾ ಆಯೋಗದ ಪ್ರಶ್ನೆಪತ್ರಿಕೆಗಳು ಸೋರಿಕೆಯಾದ ಬಗ್ಗೆ ಸಿಬಿಐ ತನಿಖೆ ನಡೆಸಬೇಕು ಎಂದು ಆಗ್ರಹಿಸುವ ನಿರ್ಣಯವನ್ನು ಕೂಡಾ ಸಭೆಯಲ್ಲಿ ಕೈಗೊಳ್ಳಲಾಯಿತು. ಪರೀಕ್ಷೆಯಲ್ಲಿ ತಮ್ಮ ಸಂಬಂಧಿಗಳಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ಕುಮಾರ್ ಅವರೇ ಪ್ರಶ್ನೆಪತ್ರಿಕೆ ಸೋರಿಕೆ ಮಾಡಿದ್ದಾರೆ ಎನ್ನುವುದು ಪೊಲೀಸರ ಆರೋಪ. ಕುಮಾರ್ ಅವರನ್ನು ಬಂಧಿಸಿ 48 ಗಂಟೆ ಕಳೆದರೂ, ಸರಕಾರ ಅವರನ್ನು ಸೇವೆಯಿಂದ ವಜಾಗೊಳಿಸುವ ಅಥವಾ ಅಮಾನತು ಮಾಡುವ ನಿರ್ಧಾರ ಕೈಗೊಂಡಿಲ್ಲ. ಹಜಾರಿಬಾಗ್‌ನಲ್ಲಿ ಬಂಧಿಸಲ್ಪಟ್ಟ ಕುಮಾರ್ ಅವರನ್ನು ಪ್ರಸ್ತುತ ಪುಲ್ವಾರಿ ಶರೀಫ್ ಜೈಲಿಗೆ ಕರೆತರಲಾಗಿದೆ.







