ಏಳು ಮಂದಿ ವಿಮಾನದಲ್ಲಿ ನಿಂತುಕೊಂಡೇ ಸೌದಿಗೆ ಪ್ರಯಾಣಿಸಿದರು!
ಪಾಕಿಸ್ತಾನದ ಇನ್ನೊಂದು ವಿಶಿಷ್ಟ ದಾಖಲೆ

ಇಸ್ಲಾಮಾಬಾದ್, ಫೆ.27: ಕರಾಚಿಯಿಂದ ಸೌದಿಅರೇಬಿಯಾಗೆ ತೆರಳಿದ ವಿಮಾನದಲ್ಲಿ ಹೆಚ್ಚುವರಿ ಪ್ರಯಾಣಿಕರನ್ನು ಕರೆದೊಯ್ಯಲಾಗಿದ್ದು, ಏಳು ಮಂದಿ ಪ್ರಯಾಣಿಕರು ನಿಂತುಕೊಂಡೇ ವಿಮಾನಯಾನ ಕೈಗೊಂಡಿದ್ದರು ಎಂಬ ಆರೋಪದ ಬಗ್ಗೆ ತನಿಖೆ ನಡೆಸುವುದಾಗಿ ಪಾಕಿಸ್ತಾನ ವಿಮಾನಯಾನ ಸಂಸ್ಥೆ ಪ್ರಕಟಿಸಿದೆ.
ಇಂಗ್ಲಿಷ್ ದೈನಿಕವೊಂದರಲ್ಲಿ ಈ ಬಗ್ಗೆ ವರದಿ ಪ್ರಕಟವಾದ ಬಳಿಕ ಘಟನೆ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ. ಜನವರಿ 20ರಂದು ಕರಾಚಿಯಿಂದ ಸೌದಿಗೆ ಹೊರಟಿದ್ದ ವಿಮಾನದಲ್ಲಿ 416 ಪ್ರಯಾಣಿಕರು ಯಾನ ಕೈಗೊಂಡಿದ್ದಾರೆ. ಜಂಪ್‌ಸೀಟ್ ಸೇರಿದಂತೆ ಇದರ ಗರಿಷ್ಠ ಸಾಮರ್ಥ್ಯ 409 ಆಗಿದೆ. ಇದು ಸುರಕ್ಷಾ ನಿಯಮಗಳನ್ನು ಉಲ್ಲಂಘಿಸಿರುವ ಗಂಭೀರ ಪ್ರಕರಣ ಎಂದು ಪತ್ರಿಕೆ ವರದಿ ಮಾಡಿತ್ತು.
ತುರ್ತು ಸಂದರ್ಭದಲ್ಲಿ ಹೀಗೆ ಆಸನ ವ್ಯವಸ್ಥೆ ಇಲ್ಲದ ಪ್ರಯಾಣಿಕರಿಗೆ ಆಮ್ಲಜನಕದ ಮಾಸ್ಕ್‌ಗಳನ್ನು ಒದಗಿಸುವುದಾಗಲೀ, ತುರ್ತು ಸಂದರ್ಭದಲ್ಲಿ ಜನರನ್ನು ತೆರವುಗೊಳಿಸಬೇಕಾದರೆ ಅಂಥ ಕಾರ್ಯಾಚರಣೆಗೆ ಕೂಡಾ ಇದರಿಂದ ಅಡ್ಡಿಯಾಗುತ್ತದೆ ಎಂದು ಉನ್ನತ ಮೂಲಗಳು ಹೇಳಿವೆ.
ಕೆಲ ಮಂದಿ ನಿಂತುಕೊಂಡೇ ವಿಮಾನದಲ್ಲಿ ಪ್ರಯಾಣಿಸಿದ್ದಾರೆ ಎಂದು ಪತ್ರಿಕೆ ವರದಿ ಮಾಡಿರುವುದು ಘಟನೆಯ ವೈಭವೀಕರಣ ಹಾಗೂ ನಿರಾಧಾರ ಎಂದು ಪಾಕಿಸ್ತಾನ ಇಂಟರ್‌ನ್ಯಾಷನಲ್ ಏರ್‌ಲೈನ್ಸ್‌ನ ವಕ್ತಾರ ದನ್ಯಾಲ್ ಗೀಲಾನಿ ಹೇಳಿದ್ದಾರೆ. ವಿಮಾನದಲ್ಲಿ ಹಾಗೆ ನಿಂತುಕೊಂಡು ಹೋಗುವುದು ಸಾಧ್ಯವೇ ಇಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ. ಅದಾಗ್ಯೂ ಹೆಚ್ಚುವರಿ ಪ್ರಯಾಣಿಕರನ್ನು ಕರೆದೊಯ್ಯಲಾಗಿದೆ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಅವರು ಸ್ಪಷ್ಟಪಡಿಸಿದರು. ಸಂಬಂಧಪಟ್ಟ ಎಲ್ಲರನ್ನೂ ಈ ಬಗ್ಗೆ ವಿಚಾರಣೆಗೆ ಗುರಿಪಡಿಸಲಾಗಿದೆ ಎಂದು ಅವರು ಹೇಳಿದ್ದಾರೆ.







