ಮಧ್ಯ ಪ್ರದೇಶದ ಈ ಗ್ರಾಮದಲ್ಲಿ 40 ವರ್ಷಗಳ ಬಳಿಕ ಒಬ್ಬ ಮಗಳ ಮದುವೆಯಾಗುತ್ತಿದೆ ! ಕಾರಣವೇನು ಗೊತ್ತೇ ?

ಭೋಪಾಲ್, ಫೆ.27: ಮಧ್ಯ ಪ್ರದೇಶದ ಭಿಂಡ್ ಜಿಲ್ಲೆಯ ಗುಮರ ಗ್ರಾಮದಲ್ಲಿ ಬರೋಬ್ಬರಿ 40 ವರ್ಷಗಳ ಬಳಿಕ ಅಲ್ಲಿನ ಹೆಣ್ಣು ಮಗಳೊಬ್ಬಳ ವಿವಾಹ ನಡೆಯಲಿದೆ. ಇದಕ್ಕೆ ಕಾರಣವೇನೆಂದು ಕೇಳಿದರೆ ಯಾರ ಮೈ ಕೂಡ ಒಮ್ಮೆ ಝುಂ ಎನ್ನದೇ ಇರದು. ಈ ಗ್ರಾಮದಲ್ಲಿ ಹುಟ್ಟಿದ ಹೆಣ್ಣು ಶಿಶುಗಳನ್ನು ಒಂದೋ ತಾಯಿಯ ಗರ್ಭದಲ್ಲಿರುವಾಗಲೇ ಕೊಲ್ಲಲಾಗುತ್ತಿತ್ತು ಇಲ್ಲವೇ ಅವುಗಳು ಜನಿಸಿದ ಕೂಡಲೇ ಅವುಗಳ ಹತ್ಯೆ ನಡೆಯುತ್ತಿತ್ತು. ಅಷ್ಟಾದರೂ ಯಾರೊಬ್ಬರೂ ಈ ಬಗ್ಗೆ ದೂರು ನೀಡಲೇ ಇಲ್ಲ. ಆದರೆ ಮೊದಲ ಬಾರಿಗೆ ಈ ಗ್ರಾಮದಲ್ಲಿ ಬದಲಾವಣೆಯ ಗಾಳಿ ಬೀಸಿದ್ದು 2003ರಲ್ಲಿ. ಪ್ರಸವಪೂರ್ವ ಲಿಂಗ ಪತ್ತೆ ಪರೀಕ್ಷೆಯನ್ನು ನಿಷೇಧಿಸುವ ಕಾಯ್ದೆಯನ್ನು ಸರಕಾರ ಈ ಗ್ರಾಮದಲ್ಲಿ ಕಟ್ಟುನಿಟ್ಟಾಗಿ ಜಾರಿಗೊಳಿಸಲಾರಂಭಿಸಿದಾಗ ಈ ಗ್ರಾಮಗಳ ಜನರಿಗೆ ಬಿಸಿ ಮುಟ್ಟಿತ್ತು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಲಿಂಗಾನುಪಾತದ ಅಂಕಿ ಅಂಶಗಳ ಪ್ರಕಾರ 1995ರಲ್ಲಿ ಈ ಗ್ರಾಮದಲ್ಲಿ ಹುಡುಗರಿಗೆ ಹೋಲಿಸಿದರೆ ಹುಡುಗಿಯರ ಅನುಪಾತ 10:0 ಇದ್ದರೆ, 2001ರಲ್ಲಿ ಅದು 10:1 ಹಾಗೂ 2011 ರಲ್ಲಿ 10:7 ಆಗಿತ್ತು.
ಇದೀಗ 40 ವರ್ಷಗಳ ಬಳಿಕ ವಿವಾಹವಾಗಲಿರುವ ಈ ಗ್ರಾಮದ ಯುವತಿ ಆರತಿ ಗುರ್ಜರ್ ಗೆ 18ರ ವಯಸ್ಸು. ಈ ವರ್ಷದ ಡಿಸೆಂಬರ್ ತಿಂಗಳಲ್ಲಿ ಆಕೆಯ ವಿವಾಹ ನಡೆಯಲಿದೆ. ಮಾರ್ಚ್ ತಿಂಗಳಲ್ಲಿ ಆಕೆಯ ಮದುವೆಯೆಂದು ಈ ಹಿಂದೆ ನಿರ್ಧರಿಸಲಾಗಿತ್ತಾದರೂ ಆಕೆಯ 12ನೆ ತರಗತಿಯ ಪರೀಕ್ಷೆಗಳ ಹಿನ್ನೆಲೆಯಲ್ಲಿ ವಿವಾಹವನ್ನು ಡಿಸೆಂಬರ್ ತಿಂಗಳಿಗೆ ಮುಂದೂಡಲಾಗಿದೆ.
ರಚನಾ ಗುರ್ಜರ್ ಎಂಬ ಈ ಗ್ರಾಮದ ಇನ್ನೊಬ್ಬಳು ಯುವತಿಗೂ ಇದೇ ವರ್ಷ ವಿವಾಹ ನಡೆಯಲಿದೆ. ವೈದ್ಯೆಯಾಗಬೇಕೆಂಬ ಕನಸು ಹೊತ್ತ ಈಕೆ ವಿವಾಹದ ನಂತರವೂ ಶಿಕ್ಷಣ ಮುಂದುವರಿಸುವ ಇಚ್ಛೆ ಹೊಂದಿದ್ದಾಳೆ.
ಆದರೆ ಈ ಗ್ರಾಮದ ಹಿರಿಯರು ಹುಡುಗಿಯರ ಈ ವಿವಾಹದ ವಿಚಾರವನ್ನು ಗುಟ್ಟಾಗಿಡಲು ಯತ್ನಿಸುತ್ತಿದ್ದಾರೆ. ಇಲ್ಲಿನ ಪ್ರತಿಯೊಂದು ಕುಟುಂಬವೂ ಕನಿಷ್ಠ ಒಂದು ಹೆಣ್ಣು ಶಿಶುವಿನ ಹತ್ಯೆಯ ಆರೋಪವನ್ನಂತೂ ಖಂಡಿತಾ ಹೊರಲೇಬೇಕಾಗುತ್ತದೆ ಎಂಬುದು ಅವರಿಗೆ ಚೆನ್ನಾಗಿ ಅರಿವಿರುವುದೇ ಇದಕ್ಕೆ ಕಾರಣ.