ಕಾಸರಗೋಡಿನಿಂದ ಕಾಣೆಯಾದ ಹಾಫೀಝ್ ಅಫ್ಘಾನಿಸ್ತಾನದಲ್ಲಿ ಕೊಲ್ಲಲ್ಪಟ್ಟ ಸಂದೇಶ

ಕಾಸರಗೋಡ್,ಫೆ. 27: ನಿಗೂಢವಾಗಿ ಕಾಸರಗೋಡು ಪಡನ್ನದಿಂದ ಕಾಣೆಯಾದ ವ್ಯಕ್ತಿಗಳಲ್ಲೊಬ್ಬ ಕೊಲ್ಲಲ್ಪಟ್ಟಿದ್ದಾನೆಂದು ಸಂದೇಶ ಬಂದಿದೆ. ಪಡನ್ನದ ಹಾಫಿಝ್ ಕೊಲೆಯಾಗಿದ್ದಾನೆಂದು ಸಂದೇಶ ಲಭಿಸಿದ್ದು," ಹಾಫಿಝ್ ಡ್ರೋನ್ ದಾಳಿಗೆ ಬಲಿಯಾಗಿದ್ದಾನೆ. ಮೃತದೇಹದ ದಫನಕಾರ್ಯ ನಡೆಸಲಾಗಿದೆ. ಹಾಫೀಝ್ ನನ್ನು ನಾವು ಹುತಾತ್ಮನಾಗಿದ್ದಾನೆಂದು ಭಾವಿಸುತ್ತೇವೆ. ನಮ್ಮ ಸರದಿಗಾಗಿ ಕಾದುಕುಳಿತಿದ್ದೇವೆ" ಎಂದು ಸಂದೇಶದಲ್ಲಿ ವಿವರಿಸಲಾಗಿದೆ.
ಹಾಫೀಝ್ ನೊಂದಿಗೆ ಕಾಣೆಯಾಗಿದ್ದ ಪಡನ್ನ ತೆಕ್ಕೇಪ್ಪುರಂನ ಅಶ್ಫಾಕ್‌ನ ಟೆಲಿಗ್ರಾಂ ಆ್ಯಪ್‌ನಿಂದ ಸಂದೇಶ ಬಂದಿದೆ. ಅಶ್ಫಾಕ್‌ನ ಕುಟುಂಬ ಸದಸ್ಯನೊಬ್ಬನ ಫೋನ್‌ಗೆ ಕಳೆದ ದಿವಸ ಸಂದೇಶ ಲಭಿಸಿದೆ. ಅಶ್ಫಾಕ್ ಈ ಹಿಂದೆ ತನ್ನ ಕುಟುಂಬ ಸದಸ್ಯ ನಿಗೆ ಟೆಲಿಗ್ರಾಂ ಆ್ಯಪ್ ಮೂಲಕ ಸಂದೇಶ ಕಳುಹಿಸಿದ್ದ.
ಪಡನ್ನದ ಹನ್ನೊಂದು ಮಂದಿ ಸಹಿತ ಕೇರಳದಿಂದ ಇಪ್ಪತ್ತರಷ್ಟು ಮಂದಿ ಕಾಣೆಯಾಗಿದ್ದರು. ಇವರಿಗೆ ಐಸಿಸ್ ಸಂಬಂಧ ಇದೆ ಎಂದು ಆರೋಪಿಸಲಾಗಿತ್ತು. ಇವರು ಅಫ್ಘಾನ್ , ಸಿರಿಯಕ್ಕೆ ಹೋಗಿದ್ದಾರೆಂದು ಶಂಕಿಸಲಾಗಿದೆ. ಹಾಫಿಝುದ್ದೀನ್ 2016 ಜೂನ್ ಐದಕ್ಕೆ ಮುಂಬೈ ವಿಮಾನ ನಿಲ್ದಾಣದ ಮೂಲಕ ದೇಶ ತೊರೆದಿದ್ದನೆಂದು ಎನ್ ಐಎಗೆ ವಿವರ ಸಿಕ್ಕಿತ್ತು. ಇವರೆಲ್ಲ ಅಫ್ಘಾನಿಸ್ತಾನದಲ್ಲಿದ್ದಾರೆಂದು ಎನ್‌ಐಎ ನಿರ್ಧಾರಕ್ಕೆ ಬಂದಿತ್ತು ಎಂದು ವರದಿ ತಿಳಿಸಿದೆ.





