ಡೈರಿ ವಿವಾದ: ಹೆಸರಿರುವ ಸಚಿವರ ರಾಜೀನಾಮೆಗೆ ಪೂಜಾರಿ ಒತ್ತಾಯ

ಮಂಗಳೂರು, ಫೆ.27: ರಾಜ್ಯ ಸರಕಾರದ ಸಚಿವರಿಂದ ಕಾಂಗ್ರೆಸ್ ಹೈಕಮಾಂಡ್‌ಗೆ ನೂರಾರು ಕೋಟಿ ರೂ. ನೀಡಿರುವ ವಿವರಗಳಿವೆ ಎನ್ನಲಾದ ಡೈರಿ ಪ್ರಕರಣಕ್ಕೆ ಸಂಬಂಧಿಸಿ ಡೈರಿಯಲ್ಲಿ ಹೆಸರಿರುವ ಸಚಿವರು ತಕ್ಷಣ ರಾಜೀನಾಮೆ ನೀಡಿ ಆದರ್ಶ ಮೆರೆಯಬೇಕು ಎಂದು ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ ಒತ್ತಾಯಿಸಿದ್ದಾರೆ.
ಪ್ರೆಸ್‌ಕ್ಲಬ್‌ನಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಡೈರಿಯಲ್ಲಿರುವ ಹೆಸರಿರುವ ಸಚಿವರು ರಾಜೀನಾಮೆ ನೀಡಬೇಕೆಂದು ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರರ ಹೇಳಿಕಯನ್ನು ಸ್ವಾಗತಿಸುತ್ತೇನೆ ಎಂದರು.
ರಾಜ್ಯದಲ್ಲಿ ಭೀಕರ ಬರಗಾಲವಿದ್ದು ಯಾವ ಪಕ್ಷಗಳು ಈ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸುತ್ತಿಲ್ಲ. ರವಿವಾರ ನಡೆದ ಕಾಂಗ್ರೆಸ್ ಸಮನ್ವಯ ಸಮಿತಿ ಸಭೆಯಲ್ಲೂ ಬರಗಾಲದ ಬಗ್ಗೆ ಮಾತುಕತೆ ನಡೆದಿಲ್ಲ ಎಂದು ವಿಷಾದಿಸಿದರು.
ಬಿಜೆಪಿಯವರು ಆ ಪಕ್ಷದ ಹೈಕಮಾಂಡ್‌ಗೆ 2 ಚೆಕ್ ಮೂಲಕ ಕಪ್ಪ ನೀಡಿದ್ದಾರೆ ಎಂದು ಕುಮಾರ್‌ಸ್ವಾಮಿ ಹೇಳಿಕೆ ನೀಡಿದ್ದಾರೆ. ಅವರು ಸುಮ್ಮನೆ ಹೇಳಿಕೆ ನೀಡುವುದನ್ನು ಬಿಟ್ಟು ಬಿಜೆಪಿ ಕಪ್ಪ ನೀಡಿದಕ್ಕೆ ದಾಖಲೆಯಿದ್ದಲ್ಲಿ ಕೂಡಲೇ ಬಿಡುಗಡೆ ಮಾಡಲಿ ಎಂದರು.
ಮಾಧ್ಯಮಗಳಿಂದು ಚುರುಕಾಗಿ ಕಾರ್ಯ ನಿರ್ವಹಿಸುತ್ತಿವೆ. ಸಮಾಜದ ಲೋಪದೋಷಗಳನ್ನು ಎತ್ತಿಹಿಡಿಯುತ್ತಿವೆ. ಮಾಧ್ಯಮ ಇಲ್ಲವಾಗಿದ್ದಲ್ಲಿ ಜನಪ್ರತಿನಿಗಳು ದೇಶವನ್ನೇ ಮಾರುತ್ತಿದ್ದರು ಎಂದು ಪೂಜಾರಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖ್ಯಸ್ಥರಾದ ಅರುಣ್ ಕುವೆಲ್ಲೋ, ಕಳ್ಳಿಗೆ ತಾರಾನಾಥ ಶೆಟ್ಟಿ, ಕರುಣಾಕರ ಶೆಟ್ಟಿ, ಪುರಂದರದಾಸ ಕುಳೂರು ಉಪಸ್ಥಿತರಿದ್ದರು.







