ಕಾರ್ಗಿಲ್ ಹುತಾತ್ಮನ ಪುತ್ರಿಯನ್ನು ದಾವೂದ್ ಗೆ ಹೋಲಿಸಿದ ಸಂಸದ ಪ್ರತಾಪ್ ಸಿಂಹ

ಹೊಸದಿಲ್ಲಿ, ಫೆ.27: ಎಡಪಂಥೀಯ ಎಐಎಸ್‌ಎ ಮತ್ತು ಆರೆಸ್ಸೆಸ್ ಬೆಂಬಲಿತ ಎಬಿವಿಪಿ ನಡುವೆ ನಡೆಯುತ್ತಿರುವ ಹಗ್ಗ ಜಗ್ಗಾಟದ ನಡುವೆಯೇ ಮೈಸೂರಿನ ಬಿಜೆಪಿ ಸಂಸದ ಪ್ರತಾಪ್ ಸಿಂಹ ವಿವಾದವೊಂದನ್ನು ಹುಟ್ಟು ಹಾಕಿದ್ದಾರೆ. ‘ನಾಟ್ ಅಫ್ರೇಡ್ ಆಫ್ ಎಬಿವಿಪಿ’ ಅಭಿಯಾನದ ಹಿಂದಿರುವ ಕಾರ್ಗಿಲ್ ಹುತಾತ್ಮರೊಬ್ಬರ ಪುತ್ರಿ ಗುರ್ಮೆಹರ್ ಕೌರ್ ಅವರನ್ನು ಭೂಗತ ಪಾತಕಿ ದಾವೂದ್ ಇಬ್ರಾಹಿಂಗೆ ಹೋಲಿಸಿ ಸಾಕಷ್ಟು ಟೀಕೆಗಳನ್ನೂ ಆಹ್ವಾನಿಸಿದ್ದಾರೆ.
ರವಿವಾರ ಸಂಜೆ ಟ್ವಿಟ್ಟರಿನಲ್ಲಿ ಕೊಲಾಜ್ ಒಂದನ್ನು ಪೋಸ್ಟ್ ಮಾಡಿದ್ದರು ಸಿಂಹ. ಅದರಲ್ಲಿ ಒಂದು ಕಡೆಯಲ್ಲಿ ಕೌರ್ ಚಿತ್ರವಿದ್ದರೆ ಇನ್ನೊಂದು ಕಡೆ ದಾವೂದ್ ಚಿತ್ರವಿದೆ. ಕೌರ್ ಚಿತ್ರದ ಮೇಲ್ಗಡೆ ‘ಯೋಧನ ಪುತ್ರಿ’ ಎಂದು ಬರೆಯಲಾಗಿದ್ದರೆ ದಾವೂದ್ ಚಿತ್ರದ ಮೇಲ್ಗಡೆ ‘ಪೊಲೀಸನ ಪುತ್ರ’ ಎಂದು ಬರೆಯಲಾಗಿತ್ತು. ಚಿತ್ರದಲ್ಲಿ ಅವರಿಬ್ಬರೂ ಪೋಸ್ಟರ್ ಗಳನ್ನು ಕೈಯ್ಯಲ್ಲಿ ಹಿಡಿದಿದ್ದು ಕೌರ್ ಕೈಯ್ಯಲ್ಲಿನ ಪೋಸ್ಟರ್ ನಲ್ಲಿ ‘‘ಪಾಕಿಸ್ತಾನ ನನ್ನ ತಂದೆಯನ್ನು ಕೊಲ್ಲಲಿಲ್ಲ, ಯುದ್ಧ ಕೊಂದಿತು’’ ಎಂದು ಬರೆಯಲಾಗಿದ್ದರೆ ‘‘ದಾವೂದ್ ಕೈಯ್ಯಲ್ಲಿನ ಪೋಸ್ಟರಿನಲ್ಲಿ ‘‘ನಾನು 1993ರಲ್ಲಿ ಜನರನ್ನು ಕೊಲ್ಲಲಿಲ್ಲ, ಬಾಂಬುಗಳು ಕೊಂದಿದ್ದವು,’’ ಎಂದು ಬರೆಯಲಾಗಿದೆ, ಕೊನೆಗೆ ಕೌರ್ ಮೇಲೆ ಇನ್ನೊಂದು ಅಸ್ತ್ರ ಸಿಡಿಸಿದ ಸಿಂಹ ‘‘ಕನಿಷ್ಠ ದಾವೂದ್ ತನ್ನ ದೇಶ ವಿರೋಧಿ ನಿಲುವನ್ನು ಸಮರ್ಥಿಸಲು ತನ್ನ ತಂದೆಯ ಹೆಸರನ್ನು ಬಳಸಲಿಲ್ಲ,’’ ಎಂದು ಬರೆದಿದ್ದಾರೆ.
‘‘ನಾನು ದಿಲ್ಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ. ನನಗೆ ಎಬಿವಿಪಿಯ ಬಗ್ಗೆ ಭಯವಿಲ್ಲ. ಭಾರತದ ಪ್ರತಿಯೊಬ್ಬ ವಿದ್ಯಾರ್ಥಿ ನನ್ನ ಜತೆಗಿದ್ದಾನೆ,’’ ಎಂದು ಬರೆದಿರುವ ಪೋಸ್ಟರ್ ಕೈಯ್ಯಲ್ಲಿ ಹಿಡಿದುಕೊಂಡಿರುವ ಚಿತ್ರವನ್ನು ಕೌರ್ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದಂದಿನಿಂದ ‘‘ನಾಟ್ ಅಫ್ರೇಡ್ ಆಫ್ ಎಬಿವಿಪಿ’ ಅಭಿಯಾನ ಹುಟ್ಟಿಕೊಂಡಿತ್ತು.
ದಿಲ್ಲಿಯ ರಾಮ್ಜಾಸ್ ಕಾಲೇಜಿನ ಆವರಣದಲ್ಲಿ ನಡೆದ ಹಿಂಸಾಚಾರದ ನಂತರ ಆಕೆ ಮೇಲಿನಂತೆ ಪೋಸ್ಟ್ ಮಾಡಿದ್ದರು. ಬಸ್ತರ್ ವಿಚಾರದಲ್ಲಿ ಭಾಷಣ ಮಾಡಲು ಜೆಎನ್‌ಯು ವಿದ್ಯಾರ್ಥಿ ಉಮರ್ ಖಾಲಿದ್ ಗೆ ನೀಡಿದ ಆಹ್ವಾನವನ್ನು ಹಿಂದಕ್ಕೆ ಪಡೆಯಬೇಕೆಂದು ಎಬಿವಿಪಿ ಮುಂದಿಟ್ಟ ಬೇಡಿಕೆಯನ್ನು ವಿರೋಧಿಸಿ ನಡೆಯುತ್ತಿದ್ದ ಶಾಂತಿಯುತ ಪ್ರತಿಭಟನೆಯ ವೇಳೆ ವಿದ್ಯಾರ್ಥಿಗಳ ಮೇಲೆ ಕಲ್ಲೆಸೆಯಲಾಗಿತ್ತು, ಎಂದು ಆಕೆ ಹೇಳಿಕೊಂಡಿದ್ದರು.
— Pratap Simha (@mepratap) February 26, 2017